Home ಮುಖಪುಟ ಸುದ್ದಿ ೪,೫೦೦ ಎಲೆಕ್ಟ್ರಿಕ್ ಬಸ್‌ಗಳಿಗೆ ರಾಜ್ಯದಿಂದ ಅನುಮೋದನೆ ಸಿಗುತ್ತಿಲ್ಲ : ತೇಜಸ್ವಿ ಕಿಡಿ

೪,೫೦೦ ಎಲೆಕ್ಟ್ರಿಕ್ ಬಸ್‌ಗಳಿಗೆ ರಾಜ್ಯದಿಂದ ಅನುಮೋದನೆ ಸಿಗುತ್ತಿಲ್ಲ : ತೇಜಸ್ವಿ ಕಿಡಿ

ಬೆಂಗಳೂರು ಜೂ.೨೯: ಬೆಂಗಳೂರಿಗೆ ಕೇಂದ್ರ ಸರ್ಕಾರ ನೀಡುವ ೪,೫೦೦ ಎಲೆಕ್ಟ್ರಿಕ್ ಬಸ್‌ಗಳ ಬಳಕೆಗೆ ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ನಗರದ ಬನಶಂಕರಿ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸರ್ಕಾರವು ಬಿಎಂಟಿಸಿಗೆ ಬರೋಬ್ಬರಿ ೪,೫೦೦ ಎಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಿದೆ.ಆದರೆ,ರಾಜ್ಯ ಸರ್ಕಾರವು ಈ ಬಸ್‌ಗಳ ನಿಯೋಜನೆಗೆ ಅಗತ್ಯವಿರುವ ಕ್ಯಾಬಿನೆಟ್ ಅನುಮೋದನೆಯನ್ನು ನೀಡದೆ ಉದಾಸೀನತೆ ತೋರುತ್ತಿದೆ ಎಂದು ಕಿಡಿಕಾರಿದರು.


ಇನ್ನು ರಾಜ್ಯ ಸರ್ಕಾರ ಈ ಬಸ್‌ಗಳನ್ನು ಪಡೆದುಕೊಳ್ಳಲು ತನ್ನ ಪಾಲಿನ ಅತ್ಯಲ್ಪ ಮೊತ್ತದ ಹಣವನ್ನು ಹೂಡಿಕೆ ಮಾಡಬೇಕಿದೆ.ಆದರೆ,ಸಾರ್ವಜನಿಕ ಹಿತಾಸಕ್ತಿಯ ಈ ಯೋಜನೆಗೆ ಒಪ್ಪಿಗೆ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಟೀಕಿಸಿದರು.


ಇದಲ್ಲದೆ, ಬಸ್ಸುಗಳ ವಿಳಂಬ ಕುರಿತು ನಾನು ಈಗಾಗಲೇ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಹ ಇದಕ್ಕೆ ಪೂರಕವಾಗಿ ಉತ್ತರಿಸಿದ್ದಾರೆ.ಈ ಸರ್ಕಾರದ ಬಳಿ ೧,೩೦೦ ಕಿಲೋಮೀಟರ್ ಹಾಗೂ ಕೇವಲ ಐಷಾರಾಮಿ ಕಾರುಗಳ ಸಂಚಾರಕ್ಕಾಗಿ ೨ ಕಿಲೋಮೀಟರ್ ಉದ್ದದ ಟನಲ್ ರಸ್ತೆಗಳಂತಹ ವಿಐಪಿ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲು ಹಣವಿದೆ.ಆದರೆ,ದಿನನಿತ್ಯ ಬಿಎಂಟಿಸಿ ಬಸ್ ಹಾಗೂ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಸಾಮಾನ್ಯ ಜನರಿಗಾಗಿ ಖರ್ಚು ಮಾಡಲು ಹಣವಿಲ್ಲವೇ ಎಂದು ಪ್ರಶ್ನಿಸಿದರು.


ರಾಜ್ಯ ಸರ್ಕಾರದ ದೃಷ್ಟಿಯಲ್ಲಿ ಸಾಮಾನ್ಯ ನಾಗರಿಕರು ಎರಡನೇ ದರ್ಜೆಯ ಪ್ರಜೆಗಳಾಗಿದ್ದಾರೆ. ಇವರಿಗೆ ಪ್ರತಿ ದಿನ ಬಸ್‌ನಲ್ಲಿ ಓಡಾಡುವ ಮಹಿಳೆಯರಾಗಲಿ, ಪಾದಚಾರಿಗಳಾಗಲಿ ಆದ್ಯತೆಯಾಗಿ ಉಳಿದಿಲ್ಲ.ಕಮಿಷನ್ ದುಡ್ಡು ಹೊಡೆಯಬಹುದಾದ ಬಿಳಿ ಆನೆಯಂತಹ ದೊಡ್ಡ ಯೋಜನೆಗಳ ಬೆನ್ನತ್ತಿರುವ ವಿಐಪಿ ಸರ್ಕಾರ ಇದಾಗಿದೆ ಎಂದು ಆರೋಪಿಸಿದರು.


ಇದೇ ವೇಳೆ, ಬೆಂಗಳೂರಿನ ಸ್ಥಳೀಯ ಮೂಲಸೌಕರ್ಯಗಳ ಕುರಿತು ಮಾತನಾಡಿದ ತೇಜಸ್ವಿ ಸೂರ್ಯ, ಬನಶಂಕರಿ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕರು ಮತ್ತು ಪಾದಚಾರಿಗಳ ಅನುಕೂಲಕ್ಕಾಗಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡಲು ಅಂದು ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರೇ ಸ್ವತಃ ಗುದ್ದಲಿ ಪೂಜೆ ನೆರವೇರಿಸಿದ್ದರು. ಆದರೆ,ಈಗ ಆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.ಯಾರೋ ಒಬ್ಬ ಗುತ್ತಿಗೆದಾರನ ಮಾತು ಕೇಳಿ, ಲಾಭದ ಉದ್ದೇಶದಿಂದ ಇಲ್ಲೊಂದು ಫ್ಲೈಓವರ್ ಮಾಡಲು ಸರ್ಕಾರ ಹೊರಟಿದೆ ಎಂದು ಕಿಡಿಕಾರಿದರು.

ಪ್ರಯಾಣಿಕರ ದೂರು ದುಮ್ಮಾನ ಆಲಿಸಿದ ಸಂಸದ


ಬನಶಂಕರಿ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿದ್ದ ಪ್ರಯಾಣಿಕರು ತಮ್ಮ ದೂರು ದುಮ್ಮಾನ ತೋಡಿಕೊಂಡರು.


ಸರಿಯಾದ ಸಮಯಕ್ಕೆ ಬಸ್ ಗಳು ಬರುತ್ತಿಲ್ಲ, ಹೆಚ್ಚುವರಿ ಬಸ್ ಗಳನ್ನು ಕೂಡ ಬಿಎಂಟಿಸಿ ಬಿಡುತ್ತಿಲ್ಲ.ಹೀಗಾಗಿ ತಮ್ಮ ದಿನ ನಿತ್ಯದ ಕೆಲಸಗಳಿಗೆ ತೆರಳಲು ತೊಂದರೆಯಾಗುತ್ತಿದೆ ಎಂದು ಪ್ರಯಾಣಿಕರು ತಮ್ಮ ಅಳಲು ತೋಡಿಕೊಂಡರು. ಬಿಎಂಟಿಸಿ ಬಸ್ ಗಳು ನಿಗದಿತ ಸಮಯಕ್ಕೆ ಬರಬೇಕು, ಬಸ್ ನಿಲ್ದಾಣದ ಬಳಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡಿದರೇ ಸಾಕಷ್ಟು ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ವೇಳೆ ಪ್ರಯಾಣಿಕರ ಅಳಲು ಆಲಿಸಿದ ಸಂಸದ ತೇಜಸ್ವಿ ಸೂರ್ಯ ಎಲ್ಲಾ ವಿಷಯಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

.