
ಬೀದರ್: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ನಿವೃತ್ತ ಚಿತ್ರಕಲಾ ಶಿಕ್ಷಕ ಸಿ.ಬಿ. ಸೋಮಶೇಖರ್ ಅವರನ್ನು ಬೀದರ್ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವಿಷ್ಣುಕಾಂತ ಠಾಕೂರ್, ಸೋಮಶೇಖರ್ ಅವರು ಆದರ್ಶ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರವೂ ಚಿತ್ರಕಲೆಯ ಮೇಲಿನ ಆಸಕ್ತಿಯನ್ನು ಮುಂದುವರಿಸಿದ್ದಾರೆ. ಬಸವಣ್ಣನವರ ಜೀವನಾಧಾರಿತ ಸುಂದರ ಚಿತ್ರಗಳನ್ನು ರಚಿಸುವ ಮೂಲಕ ಬೀದರ್ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿ ಮನೆಯಲ್ಲಿ ಆರ್ಟ್ ಗ್ಯಾಲರಿ ನಿರ್ಮಿಸಿದ್ದು, ಇದು ಜಿಲ್ಲೆಯಲ್ಲಿಯೇ ಪ್ರಥಮವಾಗಿದೆ. ಅವರು ರಚಿಸಿರುವ ಚಿತ್ರಗಳು ಅತ್ಯಂತ ಸುಂದರವಾಗಿ ಮೂಡಿಬಂದಿವೆ. ಈ ಸಾಧನೆಗೆ ಅವರ ಪತ್ನಿ ಹಾಗೂ ಮಕ್ಕಳು ಉತ್ತಮ ಸಹಕಾರ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೋಮಶೇಖರ್ ಅವರ ಕಲಾಸೇವೆಗೆ ರಾಜ್ಯಮಟ್ಟದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಗಣನೀಯ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಅವರಿಗೆ ಮಾತ್ರವಲ್ಲದೆ ಇಡೀ ಬೀದರ್ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸುದರ್ಶನ ಬಿ, ಚಂದ್ರಶೇಖರ ತೂಗಾ, ಪ್ರಕಾಶ ತಾಂದಳೆ, ಸಂತೋಷ ವನಿಕೇರಿ, ಆನಂದ ಜಾಧವ, ಉಮರ್ ಅಲಿ, ಖುರಂ, ಸತ್ಯವತಿ ಪಾಟೀಲ, ಜ್ಯೋತಿ ಭಂಡೆ, ಸುನೈನಾ, ವೈಶಾಲಿ ಪಾಠಕ ಹಾಗೂ ಶಿವಾನಂದ ಮಣಗೆ ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕರಾದ ಶ್ರೀಕಾಂತ ಬಿರಾದಾರ, ಕಾಶಿನಾಥ ಬಾಳೂರಕರ, ಆನಂದ ದೀನೆ ಹಾಗೂ ಪ್ರಭಾಕರ್ ಜೆ. ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಚಿತ್ರಕಲಾ ಶಿಕ್ಷಕರು ಭಾಗವಹಿಸಿದ್ದರು.





















