
ಆಳಂದ: ತಾಲೂಕಿನ ನಿರುಗುಡಿ ಗ್ರಾಮದಲ್ಲಿ ಬರಗಾಲ, ಮಳೆ ಕೊರತೆ ಹಾಗೂ ಸಾಲದ ಸಂಕಷ್ಟದಿಂದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೆ.21ರಂದು ಸಂಜೆ ನಡೆದಿದೆ.
ಗ್ರಾಮದ ರೈತ ಸೋಮನಾಥ ಈರಣ್ಣಾ ನಾಗೂರೆ (58) ಅವರು ಸೆ.21ರಂದು ಸಂಜೆ ಸುಮಾರು 5 ಗಂಟೆಗೆ ತಮ್ಮ ಸ್ವಂತ ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮನಾಥ ಅವರು ಸ್ವಂತವಾಗಿ 1 ಎಕರೆ 8 ಗುಂಟೆ ಜಮೀನು ಹೊಂದಿದ್ದು, ಇತರರ ಜಮೀನನ್ನು ಗುತ್ತಿಗೆ ಪಡೆದು ಸುಮಾರು 4 ಎಕರೆ ಕೃಷಿ ಮಾಡುತ್ತಿದ್ದರು ಎನ್ನಲಾಗಿದೆ. ಮಳೆ ಕೊರತೆ ಹಾಗೂ ಬರಗಾಲದಿಂದ ಕೃಷಿ ಕೈಕೊಟ್ಟ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಿಸಿದ್ದರು.
ರೈತನಿಗೆ ಸುಮಾರು 10ರಿಂದ 12 ಲಕ್ಷ ವೈಯಕ್ತಿಕ ಸಾಲವಿದ್ದು, ಬ್ಯಾಂಕ್ ಮತ್ತು ಸೊಸೈಟಿಯಲ್ಲಿ 1.08 ಲಕ್ಷ ಸಾಲವಿತ್ತು ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ಕೃಷಿಯಿಂದ ನಿರೀಕ್ಷಿತ ಆದಾಯ ಬಾರದಿರುವುದು ಹಾಗೂ ಸಾಲದ ಹೊರೆ ಹೆಚ್ಚಾಗಿರುವುದು ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ.
ಮೃತ ರೈತ ಸೋಮನಾಥ ಅವರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಕುಟುಂಬದ ಆಧಾರವಾಗಿದ್ದ ರೈತನ ಸಾವಿನಿಂದ ಪತ್ನಿ ಹಾಗೂ ಮಕ್ಕಳ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಈ ಕುರಿತು ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಅನುಸರಿಸಿದ್ದಾರೆ.
ಬರಗಾಲದಿಂದ ಕೃಷಿ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ರೈತರ ಆರ್ಥಿಕ ದುಸ್ಥಿತಿಯತ್ತ ಆಡಳಿತದ ಗಮನ ಸೆಳೆದಿದೆ. ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಹಾಗೂ ನೆರವು ಕಲ್ಪಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.























