
ಕಲಬುರಗಿ,ನ.12: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಸಾರ್ವಜನಿಕ ಆಡಳಿತ ವಿಭಾಗವು ಆಂತರಿಕ ಗುಣಮಟ್ಟ ಭರವಸೆ ಕೋಶದ (ಐಕ್ಯೂಎಸಿ) ಸಹಯೋಗದೊಂದಿಗೆ ಅಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ತರಗತಿಯಲ್ಲಿ ಸಿದ್ಧಾಂತ ಬೋಧನೆಯ ಶಿಕ್ಷಣ ವಿಧಾನಗಳು ಎಂಬ ವಿಷಯದ ಕುರಿತು ಒಂದು ದಿನದ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮವನ್ನು ಬುಧವಾರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಯುಕೆ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು, ಪ್ರಾಧ್ಯಾಪಕರು ಕೇವಲ ಪಾಠ ಬೋಧಕರಾಗಿರದೆ, ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯವನ್ನು ಬೆಳೆಸುವ ಮಾರ್ಗದರ್ಶಕರಾಗಬೇಕು ಎಂದು ಹೇಳಿದರು. ಬೋಧನೆಯು ಕೇವಲ ಉಪನ್ಯಾಸ ನೀಡುವುದು ಮತ್ತು ಪಠ್ಯಕ್ರಮವನ್ನು ಪೂರ್ಣಗೊಳಿಸುವುದಕ್ಕೆ ಸೀಮಿತವಾಗಬಾರದು. ಬದಲಾಗಿ, ವಿದ್ಯಾರ್ಥಿಗಳಲ್ಲಿ ಸಕ್ರಿಯ ಕಲಿಕೆ, ಸ್ವತಂತ್ರ ಚಿಂತನೆ ಹಾಗೂ ಜ್ಞಾನಾನ್ವೇಷಣೆಯ ಮನೋಭಾವವನ್ನು ಉತ್ತೇಜಿಸುವ ಪರಿಣಾಮಕಾರಿ ಕಲಿಕಾ ವಾತಾವರಣವನ್ನು ಅಧ್ಯಾಪಕರು ರೂಪಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಸಮಕಾಲೀನ ಶೈಕ್ಷಣಿಕ ಮತ್ತು ಸಾಮಾಜಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಉನ್ನತ ಶಿಕ್ಷಣ ಸಂಸ್ಥೆಗಳ ಬೋಧನೆ ಮತ್ತು ಕಲಿಕೆಯ ವಿಧಾನಗಳಲ್ಲಿ ಗುಣಾತ್ಮಕ ಪರಿವರ್ತನೆ ತರುವುದು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು. ವಿಶ್ವವಿದ್ಯಾಲಯಗಳು ಕೇವಲ ಉಪನ್ಯಾಸ ನೀಡುವುದು ಮತ್ತು ಪದವಿಗಳನ್ನು ಪ್ರದಾನ ಮಾಡುವುದಕ್ಕೆ ಸೀಮಿತವಾಗದೆ, ಗುಣಮಟ್ಟದ ಶಿಕ್ಷಣ, ಅರ್ಥಪೂರ್ಣ ಸಂಶೋಧನೆ, ನಾವೀನ್ಯತೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ ಪರಿಚಯಿಸಿರುವ ಮೌಲ್ಯಮಾಪನ ಮತ್ತು ಮಾನ್ಯತಾ ವ್ಯವಸ್ಥೆಯು ಉನ್ನತ ಶಿಕ್ಷಣ ಸಂಸ್ಥೆಗಳ ಕಾರ್ಯಕ್ಷಮತೆ ಹಾಗೂ ಶೈಕ್ಷಣಿಕ ಗುಣಮಟ್ಟವನ್ನು ಸಮಗ್ರವಾಗಿ ಪರಿಶೀಲಿಸಲು ಸಹಕಾರಿಯಾಗಿದೆ ಎಂದು ಅವರು ಹೇಳಿದರು. ವಿಶ್ವವಿದ್ಯಾಲಯಗಳ ಗುಣಮಟ್ಟವನ್ನು ಕೇವಲ ಪ್ರದಾನ ಮಾಡಿದ ಪದವಿಗಳ ಸಂಖ್ಯೆ ಅಥವಾ ಪ್ರಕಟಿಸಿದ ಸಂಶೋಧನಾ ಪ್ರಬಂಧಗಳ ಆಧಾರದ ಮೇಲೆ ಅಳೆಯಬಾರದು. ಬದಲಾಗಿ, ಬೋಧನೆ ಮತ್ತು ಕಲಿಕೆಯ ಗುಣಮಟ್ಟ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಉದ್ಯೋಗಾವಕಾಶಗಳು, ಸಂಶೋಧನಾ ಫಲಿತಾಂಶಗಳು, ಸಮಾಲೋಚನಾ ಸೇವೆಗಳು, ನಾವೀನ್ಯತೆ ಹಾಗೂ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ನೀಡುವ ಕೊಡುಗೆಗಳನ್ನೂ ಪರಿಗಣಿಸಿ ಮೌಲ್ಯಮಾಪನ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ತ್ಯಾಜ್ಯ ನಿರ್ವಹಣೆ, ಸಂಚಾರ ದಟ್ಟಣೆ, ಒಳಚರಂಡಿ ವ್ಯವಸ್ಥೆ ಹಾಗೂ ವಸತಿ ಸಮಸ್ಯೆಗಳಂತಹ ಸಮಕಾಲೀನ ಸವಾಲುಗಳಿಗೆ ಕ್ಷೇತ್ರಾಧಾರಿತ ಸಂಶೋಧನೆ ಮತ್ತು ಸಾಕ್ಷ್ಯಾಧಾರಿತ ನೀತಿ ಶಿಫಾರಸುಗಳ ಮೂಲಕ ಪರಿಹಾರ ಕಂಡುಕೊಳ್ಳಲು ವಿಶ್ವವಿದ್ಯಾಲಯಗಳು ಮುಂದಾಗಬೇಕು ಎಂದು ಅವರು ಹೇಳಿದರು. ಸಂಶೋಧನಾ ವಿದ್ಯಾರ್ಥಿಗಳು ಕೇವಲ ಸಂಶೋಧನಾ ಪ್ರಬಂಧಗಳ ಪ್ರಕಟಣೆಗೆ ಸೀಮಿತವಾಗದೆ, ನಾವೀನ್ಯತೆ, ಪೇಟೆಂಟ್ಗಳ ನೋಂದಣಿ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾದ ಸಂಶೋಧನಾ ಫಲಿತಾಂಶಗಳ ಸಾಧನೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಭಾರತ ಸರ್ಕಾರದ ಒಂದು ದೇಶ, ಒಂದು ಚಂದಾದಾರಿಕೆಯೋಜನೆಯಡಿ ಲಭ್ಯವಿರುವ ಸಂಶೋಧನಾ ನಿಯತಕಾಲಿಕೆಗಳು ಸೇರಿದಂತೆ ವಿವಿಧ ಶೈಕ್ಷಣಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
.ಸಿಯುಕೆಯ ಎಂಜಿನಿಯರಿಂಗ್ ನಿಕಾಯದ ಡೀನ್ ಹಾಗೂ ಐಕ್ಯೂಎಸಿ ನಿರ್ದೇಶಕ ಪೆÇ್ರ. ಅಮರೇಂದ್ರ ಮಸ್ತ ಅವರು ಮಾತನಾಡಿ, ಭಾರತವು ಶ್ರೀಮಂತ ಬೋಧನಾ ಪರಂಪರೆಯನ್ನು ಹೊಂದಿದ್ದು, ಐತಿಹಾಸಿಕವಾಗಿ ವಿಶ್ವಗುರುವಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು. ಯುಜಿಸಿ ಮತ್ತು ಎಐಸಿಟಿಇ ಮಾರ್ಗಸೂಚಿಗಳಂತಹ ಔಪಚಾರಿಕ ವ್ಯವಸ್ಥೆಗಳ ಜೊತೆಗೆ ವಿವಿಧ ಅನೌಪಚಾರಿಕ ಬೋಧನಾ ಪದ್ಧತಿಗಳೂ ಅಸ್ತಿತ್ವದಲ್ಲಿವೆ. ಆದಾಗ್ಯೂ, ಇಂದಿನ ವಿದ್ಯಾರ್ಥಿಗಳ ಕಲಿಕಾ ಅಗತ್ಯಗಳಿಗೆ ಅನುಗುಣವಾಗಿ ಬೋಧನೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಅಧ್ಯಾಪಕರು ತಮ್ಮ ಬೋಧನಾ ವಿಧಾನಗಳನ್ನು ನಿರಂತರವಾಗಿ ಸುಧಾರಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾಜ ಮತ್ತು ವರ್ತನಾ ವಿಜ್ಞಾನಗಳ ನಿಕಾಯದ ಡೀನ್ ಪೆÇ್ರ. ಪವಿತ್ರಾ ಆರ್. ಆಲೂರು ಹಾಗೂ ಮಾನವಿಕ ಮತ್ತು ಭಾಷೆಗಳ ನಿಕಾಯದ ಡೀನ್ ಪೆÇ್ರ. ಗಣೇಶ್ ಪವಾರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಾರ್ವಜನಿಕ ಆಡಳಿತ ವಿಭಾಗದ ಮುಖ್ಯಸ್ಥ ಪೆÇ್ರ. ಪ್ರಭಾಕರನ್ ಸೆಲ್ವರಾಜ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಹಾಗೂ ಕಾರ್ಯಕ್ರಮದ ಸಂಚಾಲಕ ಡಾ. ಕಿರಣ್ ಎಂ. ಗಾಜನೂರು ಅವರು ಕಾರ್ಯಾಗಾರದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಡಾ. ಮಲ್ಲಿಕಾರ್ಜುನ ಹೂಗಾರ ವಂದಿಸಿದರು.
ಕಾರ್ಯಕ್ರಮವು ವಂದೇ ಮಾತರಂನೊಂದಿಗೆ ಆರಂಭಗೊಂಡು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು. ಸಂಗೀತ ಮತ್ತು ಲಲಿತಕಲೆ ವಿಭಾಗದ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಾಗಾರದಲ್ಲಿ ಶಿಕ್ಷಣ ಕ್ಷೇತ್ರದ ಖ್ಯಾತ ಪ್ರಾಧ್ಯಾಪಕರು ಹಾಗೂ ತಜ್ಞರಿಂದ ಮೂರು ವಿಶೇಷ ಅಧಿವೇಶನಗಳನ್ನು ಆಯೋಜಿಸಲಾಗಿತ್ತು. ಹೈದರಾಬಾದ್ ವಿಶ್ವವಿದ್ಯಾಲಯದ ತುಲನಾತ್ಮಕ ಸಾಹಿತ್ಯ ಕೇಂದ್ರದ ಪ್ರಾಧ್ಯಾಪಕಿ ಪೆÇ್ರ. ಸೌಮ್ಯ ದೇಚಮ್ಮ ಸಿ.ಸಿ. ಅವರು ವಿಮರ್ಶಾತ್ಮಕ ಶಿಕ್ಷಣಶಾಸ್ತ್ರ: ಒಂದು ಪರಿಚಯ ವಿಷಯದ ಕುರಿತು ಮೊದಲ ಅಧಿವೇಶನ ನಡೆಸಿಕೊಟ್ಟರು. ಮಂಗಳೂರು ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪೆÇ್ರ. ರಾಜಾರಾಮ್ ತೋಳ್ಪಾಡಿ ಅವರು ವಿಮರ್ಶಾತ್ಮಕ ಪ್ರತಿಫಲಿತ ಶಿಕ್ಷಣಶಾಸ್ತ್ರ ವಿಷಯದ ಕುರಿತು ಎರಡನೇ ಅಧಿವೇಶನ ನಡೆಸಿದರು. ತುಮಕೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ವಿಭಾಗದ ಅಧ್ಯಕ್ಷ ಪೆÇ್ರ. ಎನ್. ಎಸ್. ಗುಂಡೂರ್ ಅವರು ತರಗತಿಯಲ್ಲಿ ಸಿದ್ಧಾಂತ ಬೋಧನೆಗೆ ಮಾನವೀಯ ವಿಧಾನ ವಿಷಯದ ಕುರಿತು ಮೂರನೇ ಅಧಿವೇಶನ ನಡೆಸಿಕೊಟ್ಟರು.
ಸಿಯುಕೆ ಪ್ರಾಧ್ಯಾಪಕರಾದ ಪೆÇ್ರ. ವಿಕ್ರಮ್ ವಿಸಾಜಿ, ಪೆÇ್ರ. ಚನ್ನವೀರ ಆರ್. ಎಂ., ಪೆÇ್ರ. ವಿಜಯೇಂದ್ರ ಪಾಂಡೆ, ಡಾ. ವಾಣಿಶ್ರೀ ಜೆ., ಡಾ. ಸಂದೀಪ್ ಇನಾಂಪುಡಿ, ಡಾ. ಹರೀಶ್ ಚೌಧರಿ, ಡಾ. ರೋಹಿಣಾಕ್ಷ ಶಿರ್ಲಾಲು, ಡಾ. ಶಿವಮೂರ್ತಿ, ಡಾ. ರಾಜಶ್ರೀ, ಡಾ. ಅರ್ಜುನ್ ಆರ್., ಡಾ. ಕೆ. ತಿಯ್ಯಾಗು, ಡಾ. ಮಯೂರ್ ಪೂಜಾರಿ, ಡಾ. ಸುರೇಶ್ ಅನುಗಂಟಿ, ಡಾ. ಪಿ. ಕುಮಾರ್ ಮಂಗಳಂ, ಡಾ. ಇನಾಮುಲ್ ಆಜಾದ್ ಹಾಗೂ ಕುಮಾರಿ ಪಿಯಾಲಿ ರಾಯ್ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಪ್ರತಿನಿಧಿಗಳು, ಸಂಪನ್ಮೂಲ ವ್ಯಕ್ತಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.





















