
ತಿಪಟೂರು, ಅ. ೨೬- ನಗರದ ಕೋಟನಾಯಕನಹಳ್ಳಿಯ ರುದ್ರಮುನಿ ಸ್ವಾಮೀಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ದಸರಾ ಗೊಂಬೆಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಆಕರ್ಷಕ ಗೊಂಬೆಗಳನ್ನು ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ದಸರಾ ಹಬ್ಬದ ವೈಶಿಷ್ಟ್ಯತೆಯನ್ನು ಪರಿಚಯಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ದಸರಾ ಹಬ್ಬದ ಮಹತ್ವ, ಅದರ ಐತಿಹಾಸಿಕ ಹಿನ್ನೆಲೆ, ಹಬ್ಬವನ್ನು ಆಚರಿಸುವ ಉದ್ದೇಶ ಹಾಗೂ ಅದರ ವಿವಿಧ ಆಚರಣೆಗಳ ಕುರಿತು ಮಾಹಿತಿ ನೀಡಲಾಯಿತು.
ನವರಾತ್ರಿಯ ಒಂಬತ್ತು ದಿನಗಳಲ್ಲಿ ಆರಾಧಿಸಲ್ಪಡುವ ನವದುರ್ಗೆಯರ ಪರಿಚಯವನ್ನು ಮಕ್ಕಳಿಗೆ ಮಾಡಿಕೊಡಲಾಯಿತು. ಇದರೊಂದಿಗೆ ದಸರಾ ಹಬ್ಬವು ಸಾರುವ ಒಳಿತಿನ ಜಯ, ಧಾರ್ಮಿಕ ನಂಬಿಕೆಗಳು ಹಾಗೂ ಸಾಂಸ್ಕೃತಿಕ ಮೌಲ್ಯಗಳ ಕುರಿತು ತಿಳಿಸಲಾಯಿತು.
ಶಾಲೆಯ ಆಡಳಿತಾಧಿಕಾರಿ ರಶ್ಮಿ ನಿರಂಜನ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಹಬ್ಬದ ಕುರಿತು ಹೆಚ್ಚಿನ ಆಸಕ್ತಿ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ದಸರಾ ಹಬ್ಬದ ಮಹತ್ವದ ಕುರಿತು ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಗೊಂಬೆಗಳ ಪ್ರದರ್ಶನವನ್ನು ವೀಕ್ಷಿಸಿದ ಮಕ್ಕಳು ಹಬ್ಬದ ಆಚರಣೆಗಳ ಕುರಿತು ತಿಳಿದುಕೊಳ್ಳುವುದರ ಜೊತೆಗೆ ಹೊಸ ಅನುಭವವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತಾಧಿಕಾರಿ ರಶ್ಮಿ ನಿರಂಜನ್ ಹಾಗೂ ಅವರ ಸಹೋದ್ಯೋಗಿಗಳು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಒಟ್ಟಾರೆಯಾಗಿ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಹಬ್ಬಗಳ ಮಹತ್ವದ ಕುರಿತು ಅರಿವು ಮೂಡಿಸುವಲ್ಲಿ ಸಹಕಾರಿಯಾಯಿತು.
























