
ಕ್ವಾಡ್ ಸಭೆ
ನವದೆಹಲಿ,ಮೇ೨೬:ಜಾಗತಿಕ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳನ್ನೊಳಗೊಂಡ ’ಕ್ವಾಡ್ ಒಕ್ಕೂಟದ ವಿದೇಶಾಂಗ ಸಚಿವರ ಉನ್ನತ ಮಟ್ಟದ ಸಭೆ ನವದೆಹಲಿಯಲ್ಲಿ ಇಂದು ನಡೆಯಿತು.
ಭಾರತದ ಅಧ್ಯಕ್ಷತೆಯಲ್ಲಿ ನಡೆದ ಈ ನಿರ್ಣಾಯಕ ಸಭೆಯ ನೇತೃತ್ವವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಅವರು, “ಮುಂದಿನ ದಿನಗಳಲ್ಲಿ ಇಂಡೋ-ಪೆಸಿಫಿಕ್ ಪ್ರದೇಶವು ಇಡೀ ಜಗತ್ತಿಗೆ ಅತ್ಯಂತ ಪ್ರಮುಖ ಕಾರ್ಯತಂತ್ರದ ಕೇಂದ್ರವಾಗಿ ಹೊರಹೊಮ್ಮಲಿದೆ” ಎಂದು ಆಶಾವಾದ ವ್ಯಕ್ತಪಡಿಸಿದರು.
ಭಾರತದ ಆತಿಥ್ಯದಲ್ಲಿ ನಡೆದ ಈ ಸಭೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ, ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಮತ್ತು ಜಪಾನ್ ವಿದೇಶಾಂಗ ಸಚಿವ ತೋಶಿಮಿತ್ಸು ಮೊಟೆಗಿ ಪಾಲ್ಗೊಂಡಿದ್ದರು. ವಾಷಿಂಗ್ಟನ್‌ನಲ್ಲಿ ನಡೆದ ಕಳೆದ ಸಭೆಯ ಸುಮಾರು ಒಂದು ವರ್ಷದ ಬಳಿಕ ಈ ನಾಲ್ಕೂ ದೇಶಗಳ ನಾಯಕರು ದೆಹಲಿಯಲ್ಲಿ ಮುಖಾಮುಖಿಯಾಗಿದ್ದಾರೆ.
ಪ್ರಾದೇಶಿಕ ಭದ್ರತೆ: ಇಂಡೋ-ಪೆಸಿಫಿಕ್ ವಲಯದಲ್ಲಿ ಎದುರಾಗುತ್ತಿರುವ ಪ್ರಸ್ತುತ ಭದ್ರತಾ ಸವಾಲುಗಳ ಕುರಿತು ನಾಯಕರು ಸುದೀರ್ಘ ಪರಿಶೀಲನೆ ನಡೆಸಿದರು.
ಸಮುದಾಯ ಮತ್ತು ಮೂಲಸೌಕರ್ಯ: ವಲಯದಲ್ಲಿ ಉತ್ತಮ ಸಂಪರ್ಕ ವ್ಯವಸ್ಥೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ತಾಂತ್ರಿಕ ಸಹಕಾರವನ್ನು ವಿಸ್ತರಿಸಲು ಒಮ್ಮತ ಮೂಡಿತು. ೨೦೨೪ರ ವಿಲ್ಮಿಂಗ್ಟನ್ ಶೃಂಗಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಮುಂದುವರಿದ ಭಾಗವಾಗಿ, ಸಮುದ್ರ ಮಾರ್ಗಗಳ ಸುರಕ್ಷತೆ ಮತ್ತು ಪ್ರಾದೇಶಿಕ ಸ್ಥಿರತೆಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಯಿತು.
ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ, ಸುರಕ್ಷತೆ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳ ’ಕ್ವಾಡ್’ ಒಕ್ಕೂಟವು ಇಂದು ಪ್ರಮುಖ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಸಭೆಯಲ್ಲಿ ಪುನರುಚ್ಚರಿಸಲಾಯಿತು.
























