
ಕಲಬುರಗಿ, ಸೆ.2: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕಲಬುರಗಿ ಜಿಲ್ಲೆಯ ಸಂಯೋಜಿತ ಎಲ್ಲಾ ಕಾಲೇಜುಗಳ ಜಂಟಿ ಆಶ್ರಯದಲ್ಲಿ, ಗೃಹ ಇಲಾಖೆ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ , ಬೇಡ ಬ್ರೋ ಮತ್ತು ರೈಸ್ ಕಾರ್ಯಕ್ರಮಗಳ ಸಹಯೋಗದೊಂದಿಗೆ ಇಂದು ಬೃಹತ್ ಪಾದಯಾತ್ರೆ ಹಾಗೂ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಈ ಜಾಗೃತಿ ಪಾದಯಾತ್ರೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸಂಯೋಜಿತವಾಗಿರುವ ವಿವಿಧ ಕಾಲೇಜುಗಳಿಂದ 8000ಕ್ಕೂ ಹೆಚ್ಚು ನೋಂದಾಯಿತ ವಿದ್ಯಾರ್ಥಿಗಳು, ಬೋಧಕರು ಮತ್ತು ಸಿಬ್ಬಂದಿ ವರ್ಗದವರು ಸಕ್ರಿಯವಾಗಿ ಭಾಗವಹಿಸಿದರು.
ಈ ಪಾದಯಾತ್ರೆಯು ಬೆಳಿಗ್ಗೆ ನಗರದ ಡಿ.ಎ.ಆರ್ ಪೆÇಲೀಸ್ ಪರೇಡ್ ಮೈದಾನದಿಂದ ಪ್ರಾರಂಭವಾಯಿತು. ಜಾಥಾವು ಏಷ್ಯನ್ ಮಾಲ್, ಐವಾನ್-ಎ-ಶಾಹಿ, ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತವನ್ನು ತಲುಪಿತು.ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸೇರಿ ಬೃಹತ್ ಮಾನವ ಸರಪಳಿಯನ್ನು ನಿರ್ಮಿಸಿ, ಮಾನವ ಸರಪಳಿಯ ನಂತರ ಪಾದಯಾತ್ರೆಯು ಆರ್ಕಿಡ್ ಮಾಲ್ ಹಾಗೂ ಹೆಲಿಪ್ಯಾಡ್, ಪೆÇಲೀಸ್ ಪರೇಡ್ ಮೈದಾನ ತಲುಪಿ ಅಂತ್ಯಗೊಳ್ಳಲಿದೆ.
ಈ ಪಾದಯಾತ್ರೆಯು ಯುವಜನರಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಡ್ರಗ್ಸ್, ಮದ್ಯಪಾನ ಮತ್ತು ತಂಬಾಕು ಸೇವನೆಯ ಭೀಕರ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ, ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ಪ್ರಮುಖ ಉದ್ದೇಶವನ್ನು ಹೊಂದಿದೆ. ಇದರೊಂದಿಗೆ, ಪ್ರಸ್ತುತ ರಾಜ್ಯದಲ್ಲಿ 6,053ಕ್ಕೂ ಹೆಚ್ಚು ರೋಗಿಗಳು ಅಂಗಾಂಗ ಕಸಿಗಾಗಿ ಕಾಯುತ್ತಿದ್ದು, ಒಬ್ಬ ದಾನಿಯು ಗರಿಷ್ಠ 8 ಜೀವ ಉಳಿಸುವ ಅಂಗಾಂಗಗಳನ್ನು ದಾನ ಮಾಡಲು ಅವಕಾಶವಿದೆ. ಹೀಗಾಗಿ ಸಾರ್ವಜನಿಕರನ್ನು ಅಂಗಾಂಗ ದಾನ ಮಾಡಲು ಮತ್ತು ಪ್ರತಿಜ್ಞೆ ಸ್ವೀಕರಿಸಲು ಪ್ರೇರೇಪಿಸುವುದು ಈ ಕಾರ್ಯಕ್ರಮದ ಮತ್ತೊಂದು ಧ್ವೇಯವಾಗಿದೆ. ಸಾರ್ವಜನಿಕರು ಹಾಗೂ ಯುವಜನರು ಮಾದಕ ವಸ್ತುಗಳಿಗೆ ಇಲ್ಲ ಎಂದು ಹೇಳಿ, ಜೀವನಕ್ಕೆ ಹೌದು ಎಂದು ಹೇಳಿ ಹಾಗೂ ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಕೈಗೊಳ್ಳಿ ಎಂದು ಗಣ್ಯರು ಮನವಿ ಮಾಡಿದರು.
ಸಚಿವ ಡಾ.ಶರಣಪ್ರಕಾಶ ಪಾಟೀಲ,ಸಂಸದ ರಾಧಾಕೃಷ್ಣ ದೊಡ್ಮನಿ,ಶಾಸಕರಾದ ಅಲ್ಲಮಪ್ರಭು ಪಾಟೀಲ,ತಿಪ್ಪಣ್ಣಪ್ಪ ಕಮಕನೂರು,ಜಗದೇವ ಗುತ್ತೇದಾರ, ಬಿ.ಜಿ ಪಾಟೀಲ,ಶಶೀಲ ನಮೋಶಿ,ಅರುಣಕುಮಾರ ಪಾಟೀಲ,ಪ್ರವೀಣ ಪಾಟೀಲ ಹರವಾಳ,ಡಾ.ಕಿರಣ ದೇಶಮುಖ ಅವರು ಸೇರಿದಂತೆ ಅನೇಕ ಗಣ್ಯರು, ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ , ಜಿಪಂ ಸಿಇಒ ರಾಹುಲ್ ಸಂಕನೂರ,ಪಾಲಿಕೆ ಆಯುಕ್ತ ಅವಿನಾಶ ಸಿಂಧೆ, ಅವರು ಸೇರಿದಂತೆ ವಿವಿಧ ಇಲಾಖೆ ಉನ್ನತ ಅಧಿಕಾರಿಗಳು ಪಾಲ್ಗೊಂಡರು.






























