
ಚಿಂಚೋಳಿ :ತಾಲೂಕಿನ ಚಿಮ್ಮಾಇದ್ಲಾಯಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಡಾ. ಅವಿನಾಶ್ ಜಾಧವ ಅವರು ರೈತರ ಹೊಲಗಳಿಗೆ ತೆರಳಿ ಬರ ಪರಿಸ್ಥಿತಿಯನ್ನು ವೀಕ್ಷಿಸಿದರು. ಈ ವೇಳೆ ಬೆಳೆ ಹಾನಿಯ ಕುರಿತು ರೈತರಿಂದ ಮಾಹಿತಿ ಪಡೆದು, ಅವರ ಸಮಸ್ಯೆಗಳನ್ನು ಆಲಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಳೆಯ ಕೊರತೆಯಿಂದ ಚಿಂಚೋಳಿ ತಾಲೂಕಿನಾದ್ಯಂತ ಬೆಳೆ ಸಂಪೂರ್ಣ ಹಾನಿಗೊಳಗಾಗಿದೆ ಎಂದು ತಿಳಿಸಿದರು. ಆದಾಗ್ಯೂ, ರಾಜ್ಯ ಸರ್ಕಾರವು ಪ್ರಥಮ ಹಾಗೂ ದ್ವಿತೀಯ ಪಟ್ಟಿಗಳಲ್ಲೂ ಚಿಂಚೋಳಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿಲ್ಲ ಎಂದು ಆಕ್ಷೇಪಿಸಿದರು.
ಚಿಂಚೋಳಿ ತಾಲೂಕನ್ನು ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ ಅವರು, ಮೂರನೇ ಪಟ್ಟಿಯಲ್ಲಿ ತಾಲೂಕಿನನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗುವುದು ಎಂಬ ವಿಶ್ವಾಸವಿದೆ ಎಂದರು. ಮುಂಬರುವ ವಿಶೇಷ ಅಧಿವೇಶನದಲ್ಲಿ ಚಿಂಚೋಳಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ತಾವು ಒತ್ತಾಯಿಸುವುದಾಗಿ ತಿಳಿಸಿದರು.
ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬಿದ ಅವರು, “ನಿಮ್ಮೊಂದಿಗೆ ನಾನು ಇದ್ದೇನೆ” ಎಂದು ಭರವಸೆ ನೀಡಿದರು. ಬರ ಪರಿಹಾರ ಕ್ರಮಗಳು ತ್ವರಿತವಾಗಿ ಜಾರಿಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಚಂದ್ರಶೇಖರ್ ಗುತ್ತೇದಾರ, ಅಶೋಕ್ ಚೌವ್ಹಾಣ, ರಾಜು ಪವಾರ, ಸಂತೋಷ್ ಗಡಂತಿ, ಶಿವಯೋಗಿ ರುಸ್ತಮಪೂರ, ಸತೀಶ್ ರೆಡ್ಡಿ, ಅಲ್ಲಮಪ್ರಭು ಮಠಪತಿ, ಪ್ರಭಾಕರ ಗೌಡ ಬೈರಂಪಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





























