Home ಜಿಲ್ಲೆ ಕಲಬುರಗಿ ಡಾ.ಎಚ್.ನರಸಿಂಹಯ್ಯನವರ ಕೊಡುಗೆ ಅಪಾರ

ಡಾ.ಎಚ್.ನರಸಿಂಹಯ್ಯನವರ ಕೊಡುಗೆ ಅಪಾರ

ಕಲಬುರಗಿ :ಜೂ.6: ಸ್ವಾತಂತ್ರ್ಯ ಹೋರಾಟಗಾರ, ಗಾಂಧೀವಾದಿ, ವಿಚಾರವಾದಿ, ಭೌತಶಾಸ್ತ್ರಜ್ಞ, ಶಿಕ್ಷಣ ತಜ್ಞ ಡಾ. ಎಚ್. ನರಸಿಂಹಯ್ಯನವರ ಕೊಡುಗೆ ಅಪಾರವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪದ “ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ”ಯಲ್ಲಿ ” ಬಸವೇಶ್ವರ ಸಮಾಜ ಸೇವಾ ಬಳಗ”ದ ವತಿಯಿಂದ ಜರುಗಿದ “ಡಾ.ಎಚ್.ನರಸಿಂಹಯ್ಯನವರ 106ನೇ ಜನ್ಮದಿನಾಚರಣೆ”ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಡಾ.ಎಚ್ಚೆನ್ ಅವರು, ‘ತೆರೆದ ಮನ’, ‘ಡಾ. ಎಚ್.ಎನ್. ಲೇಖನಗಳು’ ಎಂಬ ಕೃತಿಗಳು, ‘ಹೋರಾಟದ ಹಾದಿ’ ಆತ್ಮಕಥನವನ್ನು ರಚಿಸಿದ್ದಾರೆ. ಬೆಂಗಳೂರು ಲಲಿತಕಲಾ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದರು. ಅವರ ವಿಶಿಷ್ಟ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ದೊರೆತಿವೆ. ವೈಚಾರಿಕ, ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಲು ಇಡೀ ತಮ್ಮ ಜೀವನದುದ್ದಕ್ಕೂ ಶ್ರಮಿಸಿದರು ಎಂದರು. ಕಾರ್ಯಕ್ರಮದಲ್ಲಿ ಚಿಂತಕ ಡಾ.ರಾಜಶೇಖರ ಪಾಟೀಲ, ಕರಾವಿಪ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಸಮಾಜ ಸೇವಕ ದಿನೇಶ್ ಮಿಶ್ರಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.