
ತುಮಕೂರು, ಅ. ೨೬- ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ, ಸ್ವಾವಲಂಬನೆ ಹಾಗೂ ವ್ಯವಹಾರ ಜ್ಞಾನವನ್ನು ಬೆಳೆಸುವ ಉದ್ದೇಶದಿಂದ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳಿಂದ ಸವಿಸಂತೆ ಆಹಾರ ಮಳಿಗೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ತಂಡದ ಕೆಲಸ, ಹಣಕಾಸಿನ ನಿರ್ವಹಣೆ ಹಾಗೂ ವ್ಯವಹಾರ ಕೌಶಲಗಳನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ಶ್ರೀಗುರು ರಾಘವೇಂದ್ರ ಎಜುಕೇಷನಲ್ ಟ್ರಸ್ಟ್ನ ವ್ಯವಸ್ಥಾಪಕ ಕಾರ್ಯದರ್ಶಿ ಅನುಪಾ ಪುನೀತ್ ಹೇಳಿದರು.
ನಗರದ ಮೆಳೇಕೋಟೆ ಮುಖ್ಯ ರಸ್ತೆಯಲ್ಲಿರುವ ಕೇಂಬ್ರಿಡ್ಜ್ ಕಾಲೇಜಿನ ಆವರಣದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಸವಿಸಂತೆ ಆಹಾರ ಮಳಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಉದ್ಯಮಶೀಲತೆ ಹಾಗೂ ವ್ಯವಹಾರಿಕ ಜ್ಞಾನವನ್ನು ಬೆಳೆಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮವು ವಿಶೇಷ ಆಕರ್ಷಣೆಯಾಗಿ ಗಮನ ಸೆಳೆಯಿತು. ಈ ಸವಿ ಸಂತೆಯಲ್ಲಿ ವಿದ್ಯಾರ್ಥಿಗಳು ವಿವಿಧ ಬಗೆಯ ರುಚಿಕರವಾದ ಆಹಾರ ಪದಾರ್ಥಗಳನ್ನು ತಯಾರಿಸಿ ಮಳಿಗೆಗಳಲ್ಲಿ ಮಾರಾಟ ಮಾಡಿದರು. ವಿವಿಧ ತಿಂಡಿ-ತಿನಿಸುಗಳು ಹಾಗೂ ಸಾಂಪ್ರದಾಯಿಕ ಆಹಾರ ಪದಾರ್ಥಗಳು ಗ್ರಾಹಕರ ಗಮನ ಸೆಳೆದವು. ವಿದ್ಯಾರ್ಥಿಗಳು ಉತ್ಸಾಹದಿಂದ ಆಹಾರ ಮಳಿಗೆಗಳನ್ನು ನಿರ್ವಹಿಸಿ, ಗ್ರಾಹಕರೊಂದಿಗೆ ವ್ಯವಹರಿಸುವ ಅನುಭವವನ್ನು ಪಡೆದುಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂಬ್ರಿಡ್ಜ್ ಕಾಲೇಜಿನ ಪ್ರಾಂಶುಪಾಲ ಕೆ.ಪೃಥ್ವಿರಾಜ್ ಚೌಹಾಣ್ ಮಾತನಾಡಿ, ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕಗಳ ಅಧ್ಯಯನಕ್ಕೆ ಸೀಮಿತವಾಗಿರದೆ, ಜೀವನಕ್ಕೆ ಅಗತ್ಯವಾದ ಅನುಭವ ಮತ್ತು ಕೌಶಲಗಳನ್ನು ಗಳಿಸುವುದೂ ಆಗಿದೆ. ಈ ನಿಟ್ಟಿನಲ್ಲಿ ಸವಿಸಂತೆ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ, ಆತ್ಮವಿಶ್ವಾಸ, ನಾಯಕತ್ವ ಗುಣ, ಸಂವಹನ ಕೌಶಲ ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಬೆಳೆಸಲು ಸಹಕಾರಿಯಾಯಿತು ಎಂದರು.
ಭವಿಷ್ಯದಲ್ಲಿ ಸ್ವಂತ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗುತ್ತವೆ. ಈ ಚಟುವಟಿಕೆಯ ಮೂಲಕ ವಿದ್ಯಾರ್ಥಿಗಳು ಕೇವಲ ಆಹಾರ ತಯಾರಿಕೆಯ ಕೌಶಲವನ್ನ ಅಲ್ಲದೆ, ವ್ಯವಹಾರ ನಿರ್ವಹಣೆ, ಹಣಕಾಸಿನ ಲೆಕ್ಕಾಚಾರ, ಗ್ರಾಹಕರೊಂದಿಗೆ ಸಂವಹನ ಹಾಗೂ ತಂಡದ ಸಹಕಾರದಂತಹ ಮಹತ್ವದ ಕೌಶಲಗಳನ್ನು ಪ್ರಾಯೋಗಿಕವಾಗಿ ಕಲಿಯುವ ಅವಕಾಶ ಪಡೆದರು. ವಿದ್ಯಾರ್ಥಿಗಳಲ್ಲಿದ್ದ ಹೊಸ ಆಲೋಚನೆಗಳು, ಕಾರ್ಯತತ್ಪರತೆ ಮತ್ತು ಉದ್ಯಮಶೀಲ ಮನೋಭಾವ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು. ಈ ಕಾರ್ಯಕ್ರಮವು ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳ ಪ್ರಯತ್ನವನ್ನು ಪ್ರಶಂಸಿಸಿದರು. ತಮ್ಮ ಮಳಿಗೆಗಳಲ್ಲಿ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿ ಮಾರಾಟ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಿದರು. ಆಹಾರ ಪದಾರ್ಥಗಳ ತಯಾರಿಕೆ, ಮಳಿಗೆಗಳ ಅಲಂಕಾರ, ಬೆಲೆ ನಿಗದಿ ಹಾಗೂ ಮಾರಾಟದ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಕೇಂಬ್ರಿಡ್ಜ್ ಕಾಲೇಜಿನ ಉಪಪ್ರಾಂಶುಪಾಲರಾದ ಜಯರಾಮು, ಆಡಳಿತಾಧಿಕಾರಿ ಪ್ರಿಯಾ ಎಂ., ಕೇಂಬ್ರಿಡ್ಜ್ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಪುನೀತ್ಕುಮಾರ್, ಉಪನ್ಯಾಸಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
























