Home ಜಿಲ್ಲೆ ತುಮಕೂರು ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಧರ್ಮಸ್ಥಳ ಸಂಸ್ಥೆ ಸಂಕಲ್ಪ

ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಧರ್ಮಸ್ಥಳ ಸಂಸ್ಥೆ ಸಂಕಲ್ಪ

ಕೊರಟಗೆರೆ, ಅ. ೧೦- ದುಶ್ಚಟಮುಕ್ತ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾದ್ಯಂತ ನಿರಂತರವಾಗಿ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ಜಿಲ್ಲಾ ನಿರ್ದೇಶಕ ಪ್ರವೀಣ್ ಹೇಳಿದರು.


ಪಟ್ಟಣದ ಸಜ್ಜನರ ಬೀದಿಯಲ್ಲಿರುವ ಶ್ರೀ ಬಸವ ಸದನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಗಾಂಧಿ ಸ್ಮೃತಿ ಹಾಗೂ ನವಜೀವನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರ ಮಾರ್ಗದರ್ಶನದಲ್ಲಿ ಮದ್ಯಪಾನ ಸೇರಿದಂತೆ ವಿವಿಧ ದುಶ್ಚಟಗಳ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ವ್ಯಸನಕ್ಕೆ ಒಳಗಾದವರನ್ನು ವ್ಯಸನಮುಕ್ತರಾನ್ನಾಗಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜತೆಗೆ ಅವರ ಕುಟುಂಬದಲ್ಲಿ ನೆಮ್ಮದಿ ಮೂಡಿಸುವ ಉದ್ದೇಶದಿಂದ ಜನಜಾಗೃತಿ ವೇದಿಕೆ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ ಎಂದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ರಾಜ್ಯಾದ್ಯಂತ ಜಿಲ್ಲಾ ವೇದಿಕೆಗಳ ಮೂಲಕ ಸಾವಿರಕ್ಕೂ ಅಧಿಕ ಸಕ್ರಿಯ ಪದಾಧಿಕಾರಿಗಳು ಹಾಗೂ ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ದುಶ್ಚಟಮುಕ್ತ ಸಮಾಜ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ದಾನಿಗಳ ಸಹಕಾರದೊಂದಿಗೆ ಮದ್ಯವರ್ಜನೆ ಶಿಬಿರಗಳು, ಜಾಗೃತಿ ಸಭೆಗಳು, ಮನೆ ಬೇಟಿ ಹಾಗೂ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಲಾಗಿದೆ ಎಂದು ತಿಳಿಸಿದರು.


೧೯೯೭ ರಿಂದ ಇದುವರೆಗೂ ೨೧೨೦ ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗಿದ್ದು ಸುಮಾರು ೧೪೦ ಲಕ್ಷ ಮಂದಿ ಇದರ ಪ್ರಯೋಜನೆ ಪಡೆದು ವ್ಯಸನ ಮುಕ್ತರಾಗಿದ್ದಾರೆ. ವ್ಯಸನಮುಕ್ತರಾದವರು ಮತ್ತೆ ದುಶ್ಚಟಕ್ಕೆ ಒಳಗಾಗದಂತೆ ನವಜೀವನ ಸಮಿತಿಗಳು ಮೂಲಕ ನಿರಂತರ ಅನುಪಾಲನೆ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಸುಮಾರು ೩ ಸಾವಿರಕ್ಕೂ ಅಧಿಕ ನವಜೀವನ ಸಮಿತಿಗಳು ಕಾರ್ಯನಿರ್ವಹಿಸುತ್ತಿದ್ದು ವ್ಯಸನಮುಕ್ತರ ಯೋಗ ಕ್ಷೇಮದ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ ಎಂದು ತಿಳಿಸಿದರು.


ವ್ಯಸನ ಮುಕ್ತರದವರಲ್ಲಿ ಸ್ವಾವಲಂಬನೆಯ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಸ್ವಯಂ ಉದ್ಯೋಗ, ವ್ಯಕ್ತಿತ್ವ ವಿಕಸನ ಕೃಷಿ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕುಟುಂಬದಲ್ಲಿ ನೆಮ್ಮದಿ ಮೂಡಿಸುವ ಜತೆಗೆ ಸಮಾಜದಲ್ಲಿ ಗೌರವಯುತವಾಗಿ ಬದುಕಲು ಅಗತ್ಯವಾದ ಮಾರ್ಗದರ್ಶನವನ್ನು ನೀಡಲಾಗುತ್ತಿದೆ. ಮದ್ಯಪಾನ, ಗುಟ್ಕಾ, ಧೂಮಪಾನ ಸೇರಿದಂತೆ ವಿವಿಧ ದುಶ್ಚಟಗಳ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಜಾಗೃತಿ ಸಭೆ, ಮನೆ ಬೇಟಿ, ನವ ಜೀವನ ಸಮಿತಿ ಸಭೆ, ವ್ಯಸನಮುಕ್ತ ಸಾಧಕರಿಗೆ ಸನ್ಮಾನ, ಧಾಮಿಕ ಕಾರ್ಯಕ್ರಮ, ಮಹಿಳಾ ಕಾಗೃತಿ ಸಮಾವೇಶ, ಹಕ್ಕೋತ್ತಾಯ ಮಂಡನೆ ಯುವ ಜನರಿಗೆ ಸ್ವಾಸ್ಥ್ಯ ಸಂಕಲ್ಪ, ಜನಜಾಗೃತಿ ಸಭೆ, ಮಾದಕ ವಸ್ತು ಹಾಗೂ ಧೂಮಪಾನ ವಿರೋಧಿ ದಿನಾಚರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ|ಭಿವೃಧ್ದಿ ಯೋಜನೆ ವತಿಯಿಂದ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ವಾರ್ಷಿಕವಾಗಿ ಸುಮಾರು ೩ ಕೋಟಿ ರೂ. ಅನುದಾನ ಮೀಸಲಿಡಲಾಗುತ್ತಿದೆ. ಮದ್ಯಪಾನ ತ್ಯಜಿಸಲು ಬಯಸುವವರಿಗೆ ಬೆಳ್ತಂಗಡಿ ತಾಲ್ಲೂಕಿನ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧಾನಾ ಕೇಂದ್ರದಲ್ಲಿ ನಿರಂತರ ಮಧ್ಯವರ್ಜನ ಶಿಬಿರಗಳನ್ನು ಅಯೋಜಿಸಲಾಗುತ್ತಿದೆ. ಇದರ ಮೂಲಕ ವ್ಯಸನದಿಂದ ಹೊರಬರಲು ಬಯಸುವವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಚಿಕಿತ್ಸೆ ನೆರವು ನೀಡಲಾಗುತ್ತಿದೆ ಎಂದರು.


ಕಾರ್ಯಕ್ರಮದಲ್ಲಿ ಪ್ರಿಯದರ್ಶಿನಿ ಕಾಲೇಜಿನ ಪ್ರಾಂಶುಪಾಲ ರುದ್ದೇಶ್, ಜಿಲ್ಲಾ ಜನಜಾಗೃತಿ ವೇದಿಕೆ ಸಮಸ್ಯ ರಾಜಣ್ಣ, ಪ್ರದೀಪ್‌ಕುಮಾರ್, ಮಮತಾ, ಟಿ.ಕೆ.ಜಗದೀಶ್, ರಾಜೇಶ್ವರಿ ಸೇರಿದಂತೆ ಸೇವಾ ಪ್ರತಿನಿಧಿಗಳು, ಕೃಷಿ ಮೇಲ್ವಿಚಾರಕರು, ಜ್ಞಾನವಿಕಾಸ ಸಮನ್ವಯಾಧಿಕಾರಿಗಳು, ನವಜೀನನ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪಧಾದಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.