
ಕಲಬುರಗಿ,ಜೂ.22-ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಮಳೆ ಕೊರತೆಯಿಂದ ಮುಂಗಾರು ಬಿತ್ತನೆ ಕುಂಠಿತವಾಗಿದೆ. ಎಲ್ ನಿನೊ ಪರಿಣಾಮದಿಂದಾಗಿ ಬರಗಾಲದ ಛಾಯೆ ಆವರಿಸಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೇವಿನ ಕೊರತೆಯಿಂದ ಜಾನುವಾರುಗಳಿಗೆ ಸಂಕಷ್ಟ ಎದುರಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಬರಗಾಲ ಘೋಷಿಸಿ ಬರಗಾಲ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಬುಟ್ಟಿ, ಸಲುಕೆಗಳೊಂದಿಗೆ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಇಂದು ಧರಣಿ ಸತ್ಯಾಗ್ರಹ ನಡೆಸಲಾಯಿತು.
ಬರಗಾಲ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಮಹಿಳೆಯರು ಬುಟ್ಟಿ ತಲೆ ಮೇಲೆ ಹೊತ್ತು ಪ್ರತಿಭಟನೆ ಮಾಡಿದರು. ಪ್ರತಿಭಟನೆ ನಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಬರಗಾಲ ಘೋಷಿಸಿ ಬರಗಾಲ ಕಾಮಗಾರಿ ಆರಂಭಿಸಬೇಕು, ವಿವಿಜಿ ರಾಮಜಿ ಯೋಜನೆ ರದ್ದು ಪಡಿಸಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮುಂದುವರೆಸಬೇಕು, ಭಂಕೂರ ಗ್ರಾಮದ 2000 ಜನರಿಗೆ ಕೆಲಸ ನೀಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಉಪಾಧ್ಯಕ್ಷ ಕ್ಷೇಮಲಿಂಗ ನರೋಣಾ, ನಾಗೇಂದ್ರ ಕಂಟಿ, ಸಹ ಕಾರ್ಯದರ್ಶಿಗಳಾದ ಸಿದ್ದಮ್ಮ ದೇವನ್, ದಿಲೀಪ್ ನಾಗೂರ, ಸಾವಿತ್ರಿ ಮಾಲಗತ್ತಿ, ಸಾಯಬಣ್ಣಾ ಕೊರಬಾ, ದೇವಾನಂದ ಸೇರಿದಂತೆ ಮತ್ತಿತರರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.


























