
ಕಲಬುರಗಿ,ಏ.28-ಪುಸ್ತಕಗಳು ಜ್ಞಾನ, ಅನುಭವ ಹಾಗೂ ಜೀವನದ ಮಾರ್ಗದರ್ಶಕಗಳಾಗಿವೆ, ಒಂದು ಉತ್ತಮ ಪುಸ್ತಕ ನೆಮ್ಮದಿಯ ಬದುಕಿಗೆ ಬೆಳಕಾಗಿದೆ ಎಂದು ಖ್ಯಾತ ಸಾಹಿತಿ ಡಾ.ಸೂರ್ಯಕಾಂತ ಸುಜ್ಯಾತ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ಜಿಲ್ಲಾ ಜಾಗೃತಿ ಸಮಿತಿಯ ಕಲಬುರಗಿ ಸಂಯುಕ್ತ ಆಶ್ರಯದಲ್ಲಿ ನಗರದ ವಿಶ್ವವಿದ್ಯಾಲಯದ ಎದುರುಗಡೆ ಇರುವ ಸಿದ್ದೇಶ್ವರ ಕಾಲೊನಿಯಲ್ಲಿ ಸಾಹಿತಿ ಹಾಗೂ ಪ್ರಾಚಾರ್ಯರಾದ ಡಾ.ರಾಜಶೇಖರ ಮಾಂಗ್ ಅವರ ಮನೆಯಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಒಳ್ಳೆಯ ಯೋಜನೆಯನ್ನು ಹಾಕಿಕೊಂಡು ಪ್ರತಿಯೊಬ್ಬರ ಮನೆಯಲ್ಲಿ ಗ್ರಂಥಾಲಯ ಇರುವ ಹಾಗೆ ಮಾಡುತ್ತಿರುವುದು ಶ್ಲಾಘನೀಯ, ಇವತ್ತಿನ ವಿದ್ಯಾರ್ಥಿಗಳು ಮೊಬೈಲ್ ಮ್ಯಾನ್ ಆಗಿದ್ದು, ಅವರಲ್ಲಿ ಪುಸ್ತಕ ಓದುವ ಅಭಿರುಚಿಯನ್ನು ಬೆಳಸುವ ಕಾರ್ಯ ಪ್ರಾಧಿಕಾರ ಮಾಡುತ್ತಿದೆ ಎಂದು ಸುಜಾತ ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ ಕನ್ನಡ ಪುಸ್ತಕ ಪ್ರಾಧಿಕಾರದ ರಾಜ್ಯ ಸದಸ್ಯರಾದ ಬಿ.ಎಚ್. ನೀರಗುಡಿ ಅವರು ಮಾತನಾಡಿ, ಪುಸ್ತಕ ಪ್ರಾಧಿಕಾರ ಪುಸ್ತಕ ಪ್ರದರ್ಶನ, ವಿಚಾರ ಸಂಕಿರಣ, ಅಂಗಳದಲ್ಲಿ ತಿಂಗಳ ಪುಸ್ತಕ ವಿಶೇಷ ಕಾರ್ಯಕ್ರಮಗಳ ಹಮ್ಮಿಕೊಳ್ಳೊದರ ಜೊತೆಗೆ ಈ ಭಾಗದ ಸಾಹಿತಿಗಳ ಸಂಪುಟಗಳನ್ನು ಹೊರ ತರುವುದು ಶಾಲಾ-ಕಾಲೇಜುಗಳಲ್ಲಿ ನನ್ನ ನೆಚ್ಚಿನ ಪುಸ್ತಕ , ಪ್ರಬಂಧ ಸ್ಪರ್ಧೆ ಹಾಗೂ ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಈ ಭಾಗದ ಶಾಲಾ ಕಾಲೇಜುಗಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡುವುದು. ಮನೆ ಮನೆಗಳಲ್ಲಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ ಮಾಡುವುದು ಅವರನ್ನು ಪ್ರಾಧಿಕಾರದ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸುವದು ಎಂದು ಹೇಳಿದರು.
ಮನೆಯಲ್ಲಿ ಗ್ರಂಥಾಲಯ ನಿರ್ಮಿಸಿದ ಶಿಕ್ಷಕ ಹಾಗೂ ಸಾಹಿತಿ ಡಾ.ರಾಜಶೇಖರ ಮಾಂಗ್ ಅವರು ಸಾಹಿತ್ಯದ ಹಾಗೂ ಸ್ಪರ್ಧಾ ಪರೀಕ್ಷೆಯ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಓದಲು ನೀಡುತ್ತಿದ್ದೇನೆ.
ಇನ್ನು ದೊಡ್ಡದಾದ ಗ್ರಂಥಾಲಯ ಮನೆಯಲ್ಲಿ ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದ್ದೇನೆ ಪುಸ್ತಕಗಳು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎನ್ನುವ ಮನೋಭಾವನೆ ಹೊಂದಿದ್ದೇನೆ ಎಂದು ಹೇಳಿದರು.
ಜಿಲ್ಲಾ ಜಾಗೃತಿ ಸಮಿತಿಯ ಸಂಚಾಲಕರಾದ ಡಾ. ಶೋಭಾದೇವಿ ಚೆಕ್ಕಿ ಕಾರ್ಯಕ್ರಮ ನಿರ್ವಹಿಸಿದರು ಕಲ್ಬುರ್ಗಿ ನಗರದಲ್ಲಿ ಸಾವಿರ ಮನೆಗಳಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಮಾಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಜಾಗೃತ ಸಮಿತಿ ಸದಸ್ಯ ಡಾ ಪರ್ವೀನ್ ಸುಲ್ತಾನಾ , ರೇವಣಸಿದ್ದಪ್ಪ ದುಕಾನ, ಶ್ರೀಶೈಲ ಮದಾನೆ, ಶಿಕ್ಷಕರಾದ ಆನಂದ್ ಕೊಡೇಕಲ್, ವಿಜಯಕುಮಾರ್ ರಾವೂರ್, ಅರುಣಕುಮಾರ ಪಾಂಡವ, ಧೂಳಪ್ಪ ದ್ಯಾಮನಕರ್, ಭೀಮೇಶ್ವರಿ ಮಾಂಗ್, ಬರಗಾಲಿ ಕುಸನೂರು ಇದ್ದರು.






















