
ವಿಜಯಪುರ, ಆ.21: ದೇವರಾಜ ಅರಸು ವಿಚಾರ ವೇದಿಕೆ ವತಿಯಿಂದ ಆಯೋಜಿಸಿದ್ದ ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ, ಜೀವಮಾನದುದ್ದಕ್ಕೂ ಸಾಮಾಜಿಕ ನ್ಯಾಯಕ್ಕಾಗಿ ಸದಾ ಗಟ್ಟಿಯಾಗಿ ಧ್ವನಿ ಎತ್ತಿ, ಬಡವರ ಪರವಾಗಿ ಸೇವೆ ಸಲ್ಲಿಸಿದ ಹಿರಿಯ ನ್ಯಾಯವಾದಿ ಕೆ.ಎಫ್. ಅಂಕಲಗಿ ಅವರನ್ನು ಸಂಸ್ಥಾಪಕ ಅಧ್ಯಕ್ಷ ಸೋಮನಾಥ ಕಳ್ಳಿಮನಿ ಅವರು ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೆ.ಎಫ್. ಅಂಕಲಗಿ, ದೇವರಾಜ ಅರಸು ಅವರು ಕೇವಲ ಹಿಂದುಳಿದ ವರ್ಗಗಳ ನಾಯಕರಾಗಿರಲಿಲ್ಲ. ಅವರು ಜಾರಿಗೆ ತಂದ ಭೂ ಸುಧಾರಣಾ ಯೋಜನೆಯ ಫಲಾನುಭವಿಗಳಲ್ಲಿ ಎಲ್ಲ ಮೇಲ್ವರ್ಗದ ಬಡವರೂ ಸೇರಿದ್ದಾರೆ. ಹೀಗಾಗಿ ಅರಸು ಅವರು ಸಮ ಸಮಾಜ ನಿರ್ಮಾಣದ ದೂರದೃಷ್ಟಿಯ ನಾಯಕ ಎಂದು ಹೇಳಿದರು.
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಹಾವನೂರು ವರದಿಯನ್ನು ಯಥಾವತ್ತಾಗಿ ಜಾರಿಗೆ ತಂದ ಮಹಾನ್ ಸಾಮಾಜಿಕ ಪರಿವರ್ತನಾಕಾರ ದೇವರಾಜ ಅರಸು ಎಂದು ಬಣ್ಣಿಸಿದರು. ಅವರು ಜಾರಿಗೆ ತಂದ ಯೋಜನೆಗಳಾದ ವಿದ್ಯಾರ್ಥಿಗಳಿಗೆ ವಸತಿ ಹಾಗೂ ಶಿಕ್ಷಣದ ಕಲ್ಪನೆಗಳು ಇಂದು ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಅರಸು ಅವರ ದೂರದೃಷ್ಟಿಗೆ ಸಾಕ್ಷಿಯಾಗಿದೆ ಎಂದರು.
ಉಳುವವನೇ ಭೂಮಿಯ ಒಡೆಯ ಎಂಬ ಭೂ ಸುಧಾರಣಾ ಯೋಜನೆಯಡಿ ರಾಜ್ಯದಲ್ಲಿ ಸುಮಾರು 30 ಲಕ್ಷ ಎಕರೆ ಜಮೀನನ್ನು ಬಡ ಕೂಲಿಕಾರರಿಗೆ ಹಂಚಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.
ಸಿಕ್ಯಾಬ್ ಸಂಸ್ಥೆಯ ಮುಖ್ಯಸ್ಥ ಸಲಾಹುದ್ದೀನ್ ಪುನೇಕರ್ ಮಾತನಾಡಿ, ಇಂದಿನ ಯುವ ಪೀಳಿಗೆ ಅನುಭವಿಸುತ್ತಿರುವ ವಿದ್ಯಾರ್ಥಿವೇತನ, ಉನ್ನತ ಶಿಕ್ಷಣದ ಸೌಲಭ್ಯ ಸೇರಿದಂತೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದ ಮಹನೀಯರನ್ನು ಸದಾ ನೆನಪಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪಾಟೀಲ, ಚಿಂಚಲಕರ್, ಚಿದಾನಂದ ನಿಂಬಾಳ, ರಾಮು ಹೊಸಪೇಟೆ, ವಿದ್ಯಾವತಿ ಅಂಕಲಗಿ, ಮಲ್ಲು ಬಿದರಿ, ಈರಣ್ಣ, ಸಂಗಮೇಶ ಕವಡಿಮಟ್ಟಿ, ಬಂದೇನವಾಜ್, ಎಂ.ಎಸ್. ಕಳ್ಳಿಮನಿ, ಗಂಗಾಧರ ಹೊನವಾಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.






























