Home ಜಿಲ್ಲೆ ತುಮಕೂರು ಹದಗೆಟ್ಟ ಪಾವಗಡ ರಸ್ತೆಗಳು: ವಾಹನ ಸವಾರರ ಪರದಾಟ

ಹದಗೆಟ್ಟ ಪಾವಗಡ ರಸ್ತೆಗಳು: ವಾಹನ ಸವಾರರ ಪರದಾಟ

ಪಾವಗಡ, ಅ. ೧೭- ಪಟ್ಟಣದಲ್ಲಿ ಮುಖ್ಯ ರಸ್ತೆಗಳಾದ ತುಮಕೂರು ರಸ್ತೆ, ಸಿರಾ ರಸ್ತೆ, ಹಿಂದೂಪುರ ರಸ್ತೆ ಮತ್ತು ಹೊಸ ಬಸ್ ನಿಲ್ದಾಣ ಹಾಗೂ ಶನಿಮಹಾತ್ಮ ದೇವಸ್ಥಾನದ ಪಕ್ಕದ ರಸ್ತೆಗಳಲ್ಲಿ ಗುಂಡಿಗಳು ಬಿದ್ದು, ವಾಹನ ಸವಾರರು ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ಆದರೂ ಸಹ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಹಾಗೂ ಪುರಸಭೆಯವರು ಇದಕ್ಕೂ ನಮಗೂ ಯಾವುದೇ ರೀತಿಯ ಸಂಬಂಧ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದಾರೆ. ಇದರಿಂದ ಪಟ್ಟಣದ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ಪಟ್ಟಣದ ಎಸ್.ಎಸ್.ಕೆ. ಸಮುದಾಯ ಭವನ ಮುಂಭಾಗದ ಹೊಸ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಅತಿ ಹೆಚ್ಚು ವಾಹನಗಳು ಸಂಚರಿಸುವ ರಸ್ತೆಯಾದ ಯೂನಿಯನ್ ಬ್ಯಾಂಕ್ ಮುಂಭಾಗ ಟಾರ್ ರಸ್ತೆಯು ಗುಂಡಿಗಳಿಂದ ಕೂಡಿದೆ. ಕಲ್ಲು ಮಣ್ಣುಗಳಿಂದ ದ್ವಿಚಕ್ರ ವಾಹನ ಆಯ ತಪ್ಪಿ ಪ್ರತಿನಿತ್ಯ ದ್ವಿಚಕ್ರ ವಾಹನ ಸವಾರರು ವಾಹನಗಳಿಂದ ಕೆಳಗೆ ಬಿದ್ದು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ,


ಇತ್ತೀಚೆಗೆ ಆಟೋ ಚಾಲಕರೊಬ್ಬರು ತಮ್ಮ ಸ್ಕೂಟಿಯಲ್ಲಿ ಸಂಚರಿಸುವಾಗ ಇದೇ ಸ್ಥಳದಲ್ಲಿ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ.


ಇನ್ನು ಸಿರಾ ರಸ್ತೆಯ ಮಾರ್ಗದ ದೇವಲಕೆರೆ ಕ್ರಾಸ್ ಬಳಿ ಅತಿ ವೇಗವಾಗಿ ಚಲಿಸಿ, ಗುಂಡಿಗಳು ಇರುವುದರಿಂದ ಮತ್ತು ಎಲ್ಲಿಯೂ ರಸ್ತೆ ಉಬ್ಬುಗಳಿಲ್ಲದಿರುವುದರಿಂದ ಬೈಕ್ ಸವಾರರು ಸ್ಥಳದಲ್ಲಿ ಮರಣ ಹೊಂದಿರುವ ಘಟನೆಯೂ ಜರುಗಿದೆ.


ವೆಂಕಟರಮಣಪ್ಪ ಎನ್ನುವ ೬೩ ವರ್ಷದ ವಯೋವೃದ್ಧರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಅವರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ,


ಇನ್ನು ಇದೇ ರಸ್ತೆಯ ಮಾರ್ಗದಲ್ಲಿ ೬೫ ವರ್ಷದ ಮುಕುಂದಪ್ಪ ತಮ್ಮ ಸ್ಕೂಟಿಯಲ್ಲಿ ಸಂಚರಿಸುವಾಗ ರಸ್ತೆ ತಿರುವಿನಲ್ಲಿ ಅತಿ ವೇಗವಾಗಿ ಬಂದ ಸ್ಕೂಟರ್ ಡಿಕ್ಕಿ ಹೊಡೆದ್ದರಿಂದ ಮುಕುಂದಪ್ಪ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ,


ಅಲ್ಲದೆ ದೇವಲಕೆರೆ ಕ್ರಾಸ್ ಬಳಿ ಯಾವುದೇ ರೀತಿಯಾದಂತಹ ಮಾರ್ಗ ಸೂಚನಾ ಫಲಕಗಳು ಇಲ್ಲದೆ ಹಾಗೂ ರಸ್ತೆ ಉಬ್ಬುಗಳಿಲ್ಲದೆ ಇರುವುದರಿಂದ ನಿತ್ಯ ಅಪಘಾತಗಳಾಗುತ್ತಿವೆ.


ರಾಜ್ಯದಲ್ಲಿ ಸುಪ್ರಸಿದ್ಧ ಶನಿಮಹಾತ್ಮ ದೇವಸ್ಥಾನ ಇದ್ದು, ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಶನಿ ದೇವರ ದೇವಸ್ಥಾನ ಪಕ್ಕದಲ್ಲಿ ಹೋಗುವ ಮಾರ್ಗಮಧ್ಯೆದಲ್ಲಿ ಗುಂಡಿಗಳು ಬಿದ್ದಿವೆ. ಸಾಕಷ್ಟು ಬಾರಿ ಪುರಸಭೆಯವರು ಗಮನಕ್ಕೆ ತಂದಿದ್ದೇನೆ. ಆದರೆ ಅವರು ಯಾವುದೇ ರೀತಿಯಾದ ತಲೆ ಕೆಡಿಸಿಕೊಂಡಿಲ್ಲ. ಈಗಲಾದರೂ ಕಾಲ ಮಿಂಚಿಲ್ಲ ಪುರಸಭೆ ಎಚ್ಚೆತ್ತುಕೊಂಡು ಪಟ್ಟಣದಲ್ಲಿ ಎಲ್ಲೆಲ್ಲಿ ಗುಂಡಿಗಳು ಬಿದ್ದಿದೆ. ಅವುಗಳನ್ನು ಸಮತಟ್ಟು ಮಾಡುವ ಕೆಲಸಕ್ಕೆ ಮುಂದಾಗಬೇಕು. ಇಲ್ಲದಿದ್ದ ಪಕ್ಷದಲ್ಲಿ ಪಾವಗಡದ ವಿವಿಧ ಸಂಘ ಸಂಸ್ಥೆಗಳಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಸ್‌ಎಸ್‌ಕೆ ಸಂಘದ ಮಾಜಿ ಅಧ್ಯಕ್ಷ ಕೆ.ವಿ. ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.


ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ, ಪುರಸಭೆ ಇಲಾಖೆ ಕಣ್ಮುಚ್ಚಿ ಕುಳಿತಿದ್ದು, ಅಪಘಾತಗಳು ಸಂಭವಿಸಿ ಅಸ್ಪತ್ರೆ ಪಾಲಾಗುತ್ತಿದ್ದು, ಪ್ರಾಣ ಹಾನಿಯು ಸಂಭವಿಸುತ್ತಿದೆ. ಸಂಬಂಧಪಟ್ಟ ಇಲಾಖೆಗಳು ಜನರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ, ಪುರಸಭೆ ಕೂಡಲೇ ಗಮನಹರಿಸಿ ರಸ್ತೆ ಗುಂಡಿಗಳನ್ನು ಸರಿಪಡಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.