
ನವಲಗುಂದ,ಆ೫: ನವಲಗುಂದ ತಾಲ್ಲೂಕು ಹಾಗು ಅಣ್ಣಿಗೇರಿ ತಾಲೂಕಿನ ಹಳ್ಳಿಗಳಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೆ ಜನರು ಪರದಾಡುವಂತಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಬರದೇ ದಿನನಿತ್ಯ ಶಾಲಾ ಕಾಲೇಜಿನ ನಿಗದಿತ ಸಮಯಕ್ಕೆ ಕಾಲೇಜಿಗೆ ಹೋಗದೆ ಗೋಳಾಡುವಂತಾಗಿದೆ.
ನವಲಗುಂದ ನಗರಕ್ಕೆ ಘಟಕ ಪ್ರಾರಂಭವಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೆಚ್ಚುವರಿ ಬಸ್ಸಿನ ವ್ಯವಸ್ಥೆಯನ್ನು ಮಾಡದೆ ಇರುವುದು ವಿಪರ್ಯಾಸ. ತಕ್ಷಣ ಅಣ್ಣಿಗೇರಿ ಮತ್ತು ನವಲಗುಂದದ ಬಸ್ಸಿನ ಅವ್ಯವಸ್ತೆಯನ್ನು ಸರಿಪಡಿಸಿ ಹೆಚ್ಚುವರಿ ಸರತಿಗಳಂತೆ ಹೆಚ್ಚು ಹೆಚ್ಚು ಬಸ್ ಗಳನ್ನು ಕಾರ್ಯಾಚರಣೆಗೊಳಿಸುವಂತೆ ಜಿಲ್ಲಾ ಬಿಜೆಪಿ ಗ್ರಾಮಾಂತರ ಕಾರ್ಯದರ್ಶಿಗಳು ಅಣ್ಣಿಗೇರಿ ಪಿ.ಎಲ್. ಡಿ ಬ್ಯಾಂಕ್ ಅಧ್ಯಕ್ಷರಾದ ದೇವರಾಜ ಬ. ದಾಡಿಬಾವಿಯವರು ಹುಬ್ಬಳ್ಳಿ ಗ್ರಾಮೀಣ ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ಹಾಗೂ ಘಟಕ ವ್ಯವಸ್ಥಾಪಕರಿಗೆ ಆಗ್ರಹಿಸಿದ್ದಾರೆ.






























