
ಔರಾದ್ :ಜೂ.6: ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಮೂರು ವರ್ಷದ ಸಾಧನೆಗಳ ಕುರಿತು ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ತಾಲೂಕು ಮಟ್ಟದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚೆನ್ನಪ್ಪ ಉಪ್ಪೆ ಅವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು.
ಅಲ್ಲದೆ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು
ಮತ್ತಷ್ಟು ಜನರಿಗೆ ತಲುಪಿಸುವ ಮೂಲಕ ಅರ್ಹ ಫಲಾನುಭವಿಗಳು ಯೋಜನೆಗಳ ಸದುಪಯೋಗ ಪಡೆಯುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್ ಮಾತನಾಡಿ,
ಪಂಚ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಜೀವನಮಟ್ಟ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.
ಸರ್ಕಾರದ ಜನಪರ ಯೋಜನೆಗಳ ಸೌಲಭ್ಯಗಳನ್ನು ಪ್ರತಿಯೊಬ್ಬ ಅರ್ಹ ವ್ಯಕ್ತಿಗೆ ತಲುಪಿಸುವ ಕಾರ್ಯವಾಗಬೇಕಿದೆ ಎಂದು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ (ಗ್ರಾ.ಉ) ಶಿವಕುಮಾರ ಘಾಟೆ ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಬಾಳಾಸಾಹೇಬ ಪಾಟೀಲ್, ಸದಸ್ಯರಾದ ಶಿವಕುಮಾರ ಪಾಟೀಲ್, ಶಂಕರ ಪಾಟೀಲ್, ಡಿಕೆ ಚಂದು, ಚೆನ್ನಬಸಪ್ಪ ಕೌಠಾ, ಕೃಷ್ಣಾ ಕಾಂಬಳೆ, ಸಲ್ಲಾವುದ್ದಿನ ಜಂಬಗಿ ಹಾಗೂ ಸಿಡಿಪಿಒ, ಕೆಇಬಿ, ಆಹಾರ ಇಲಾಖೆ, ಯುವನಿಧಿ, ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ತಾಲೂಕು ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.

























