Home ಜಿಲ್ಲೆ ದೀಪಾವಳಿ ಸಂಭ್ರಮಕ್ಕೆ ಮೆರುಗು ನೀಡಿದ ಸಿಂಗರಿಸಿದ ಎಮ್ಮೆ-ಕೋಣಗಳ ಓಟ

ದೀಪಾವಳಿ ಸಂಭ್ರಮಕ್ಕೆ ಮೆರುಗು ನೀಡಿದ ಸಿಂಗರಿಸಿದ ಎಮ್ಮೆ-ಕೋಣಗಳ ಓಟ

ಬೀದರ್: ದೀಪಾವಳಿ ಹಬ್ಬದ ಬಲಿಪಾಡ್ಯಮಿ ಅಂಗವಾಗಿ ನಗರದ ಐತಿಹಾಸಿಕ ಚೌಬಾರಾ ಬಳಿ ಗೌಳಿ ಸಮಾಜದ ವತಿಯಿಂದ ಸಾಂಪ್ರದಾಯಿಕ ಎಮ್ಮೆ-ಕೋಣಗಳ ಓಟ ಹಾಗೂ ಮೆರವಣಿಗೆ ಮಂಗಳವಾರ ಸಂಭ್ರಮದಿಂದ ನಡೆಯಿತು.

ಗೌಳಿ ಸಮಾಜದ ಬಾಂಧವರು ತಮ್ಮ ಜೀವನಾಧಾರವಾಗಿರುವ ಎಮ್ಮೆ ಮತ್ತು ಕೋಣಗಳನ್ನು ಬಣ್ಣ, ಹೂಮಾಲೆ, ರಿಬ್ಬನ್, ಗೆಜ್ಜೆ ಹಾಗೂ ನವಿಲುಗರಿಗಳಿಂದ ಆಕರ್ಷಕವಾಗಿ ಸಿಂಗರಿಸಿ ಪೂಜೆ ಸಲ್ಲಿಸಿದರು. ಸಂಜೆ ಐದು ಕಟ್ಟುಮಸ್ತಾದ ಕೋಣಗಳನ್ನು ಚೌಬಾರಾ ಬಳಿ ಕರೆತಂದು ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಬ್ಯಾಂಡ್, ಬಾಜಾ ಹಾಗೂ ಪಟಾಕಿಗಳ ಸದ್ದಿನ ನಡುವೆ ಎಮ್ಮೆ-ಕೋಣಗಳನ್ನು ಚೌಬಾರಾ ಸುತ್ತಲೂ ಓಡಿಸಲಾಯಿತು. ಈ ವೇಳೆ ಜಾನುವಾರುಗಳ ಶಕ್ತಿ, ಚುರುಕುತನ ಹಾಗೂ ಆರೋಗ್ಯದ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಅಲ್ಲಿಂದ ಜನವಾಡಾ ರಸ್ತೆಯ ರೋಕಡೆ ಹನುಮಾನ ಮಂದಿರಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಪೂರ್ಣಗೊಳಿಸಿದರು.

ಗೌಳಿ ಸಮುದಾಯದ ಯುವಕರು ಸಾಂಪ್ರದಾಯಿಕ ಉಡುಪು ಧರಿಸಿ ಜಾನುವಾರುಗಳೊಂದಿಗೆ ಕುಣಿದು ಕುಪ್ಪಳಿಸುತ್ತ ಮೆರವಣಿಗೆಯಲ್ಲಿ ಪಾಲ್ಗೊಂಡರು. ಗೌಳಿ ಸಮುದಾಯದ ಪಾಲಿಗೆ ಎಮ್ಮೆ-ಕೋಣಗಳು ಕೇವಲ ಜಾನುವಾರುಗಳಲ್ಲ, ಅವು ಜೀವನೋಪಾಯದ ಪ್ರಮುಖ ಆಧಾರ ಹಾಗೂ ಸಂಪತ್ತು. ಹೈನುಗಾರಿಕೆಯನ್ನೇ ಪ್ರಮುಖ ಕಸುಬಾಗಿಸಿಕೊಂಡಿರುವ ಸಮಾಜದ ಬಾಂಧವರು ವರ್ಷವಿಡೀ ಹಾಲಿನ ವ್ಯಾಪಾರದ ಮೂಲಕ ಜೀವನ ಸಾಗಿಸುತ್ತಾರೆ. ತಮ್ಮ ಬದುಕಿಗೆ ಆಧಾರವಾಗಿರುವ ಜಾನುವಾರುಗಳಿಗೆ ಕೃತಜ್ಞತೆ ಸಲ್ಲಿಸಿ, ಅವುಗಳ ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುವ ಉದ್ದೇಶದಿಂದ ತಲೆತಲಾಂತರಗಳಿಂದ ಈ ಆಚರಣೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಧಾರ್ಮಿಕ ನಂಬಿಕೆಯ ಪ್ರಕಾರ ಎಮ್ಮೆ ಅಥವಾ ಕೋಣ ಯಮಧರ್ಮರಾಜನ ವಾಹನವೆಂದು ಪರಿಗಣಿಸಲಾಗುತ್ತದೆ. ದೀಪಾವಳಿಯ ಬಲಿಪಾಡ್ಯಮಿಯಂದು ಅವುಗಳನ್ನು ಪೂಜಿಸುವುದರಿಂದ ದುಷ್ಟಶಕ್ತಿಗಳ ಪ್ರಭಾವ ದೂರವಾಗಿ ಜಾನುವಾರುಗಳಿಗೆ ರೋಗರುಜಿನಗಳು ಬಾರದಂತೆ ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆಯೂ ಈ ಆಚರಣೆಯ ಹಿಂದಿದೆ.

ಆಧುನಿಕ ಜೀವನಶೈಲಿ ಹಾಗೂ ನಗರೀಕರಣದ ಪರಿಣಾಮವಾಗಿ ನಗರದಲ್ಲಿ ಎಮ್ಮೆ ಸಾಕಾಣಿಕೆ ಪ್ರಮಾಣ ಕಡಿಮೆಯಾಗುತ್ತಿದ್ದರೂ, ಪೂರ್ವಜರಿಂದ ಬಂದಿರುವ ಈ ವಿಶಿಷ್ಟ ಸಂಪ್ರದಾಯವನ್ನು ಗೌಳಿ ಸಮಾಜ ಇಂದಿಗೂ ಉಳಿಸಿಕೊಂಡು ಬಂದಿದೆ. ಯುವಕರು ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಸಾಂಸ್ಕøತಿಕ ಪರಂಪರೆಯನ್ನು ಪರಿಚಯಿಸುತ್ತಿರುವುದು ವಿಶೇಷವಾಗಿದೆ. ಈ ಆಚರಣೆ ಸಮುದಾಯದ ಒಗ್ಗಟ್ಟು, ಸಹಬಾಳ್ವೆ ಹಾಗೂ ಸಾಮರಸ್ಯದ ಸಂಕೇತವಾಗಿ ಗಮನ ಸೆಳೆಯಿತು.
ಬಿಜೆಪಿ ಮುಖಂಡರಾದ ಈಶ್ವರಸಿಂಗ ಠಾಕೂರ, ಮಹಾನಗರ ಪಾಲಿಕೆ ಸದಸ್ಯ ಶಶಿಧರ ಹೊಸಳ್ಳಿ ಹಾಗೂ ಗೌಳಿ ಸಮಾಜದ ಪ್ರಮುಖರಾದ ನರೇಶ ಗೌಳಿ, ಗೋರಖನಾಥ ಗೌಳಿ, ವಿಠಲರಾವ ಗೌಳಿ, ರಾಮಚಂದ್ರ ಗೌಳಿ, ಹೇಮಾಜಿ ಸೇರಿದಂತೆ ಗೌಳಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.