Home ಕ್ರೈಂ ಸುದ್ದಿಗಳು ದಾಂಡೇಲಿ ಜಿಪ್‍ಲೈನ್ ದುರಂತ: 30-40 ಅಡಿ ಎತ್ತರದಿಂದ ಬಿದ್ದು ವಿಜಯಪುರದ ಯುವಕ ಗಂಭೀರ ಗಾಯ

ದಾಂಡೇಲಿ ಜಿಪ್‍ಲೈನ್ ದುರಂತ: 30-40 ಅಡಿ ಎತ್ತರದಿಂದ ಬಿದ್ದು ವಿಜಯಪುರದ ಯುವಕ ಗಂಭೀರ ಗಾಯ

ವಿಜಯಪುರ, ಜು.19: ಪ್ರವಾಸದ ಸಂಭ್ರಮಕ್ಕಾಗಿ ದಾಂಡೇಲಿಯ ಸ್ಟಲಿರ್ಂಗ್ ರಿವರ್ ರೆಸಾರ್ಟ್‍ಗೆ ತೆರಳಿದ್ದ ವಿಜಯಪುರ ನಗರದ ಯುವಕ ಕುಬೇರ ಸುರಪುರ ಜಿಪ್‍ಲೈನ್ ಚಟುವಟಿಕೆ ವೇಳೆ ಸಂಭವಿಸಿದ ಭೀಕರ ಅವಘಡದಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಜಿಪ್‍ಲೈನ್‍ನ ಲಾಕ್ ಕಟ್ ಆಗಿದ್ದರಿಂದ ಸುಮಾರು 30 ರಿಂದ 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಪರಿಣಾಮ ಅವರ ಎರಡೂ ಕೈ ಹಾಗೂ ಎರಡೂ ಕಾಲುಗಳ ಎಲುಬುಗಳು ಮುರಿದು, ನರಗಳಿಗೂ ಗಂಭೀರ ಹಾನಿಯಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಕಳೆದ ಜುಲೈ 3ರಂದು ಕುಬೇರ ಸುರಪುರ ಅವರು ತಮ್ಮ ಸಹೋದರ ಪ್ರಶಾಂತ ಸುರಪುರ ಅವರೊಂದಿಗೆ ದಾಂಡೇಲಿಯ ಸ್ಟಲಿರ್ಂಗ್ ರಿವರ್ ರೆಸಾರ್ಟ್‍ಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಜಿಪ್‍ಲೈನ್ ಚಟುವಟಿಕೆಯಲ್ಲಿ ಭಾಗವಹಿಸಿದ್ದಾಗ ಏಕಾಏಕಿ ಸುರಕ್ಷತಾ ಲಾಕ್ ಕಟ್ ಆಗಿ ಅವರು ಕೆಳಗೆ ಬಿದ್ದಿದ್ದಾರೆ. ಈ ಭಯಾನಕ ದೃಶ್ಯವು ಸಹೋದರ ಪ್ರಶಾಂತ ಅವರ ಮೊಬೈಲ್‍ನಲ್ಲಿ ಸೆರೆಯಾಗಿದೆ.
ಅಪಘಾತದ ತಕ್ಷಣ ಕುಬೇರ ಅವರನ್ನು ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಅವರನ್ನು ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ಸ್ಥಳಾಂತರಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇನ್ನೂ ಕೈ ಹಾಗೂ ಕಾಲುಗಳಿಗೆ ಹೆಚ್ಚಿನ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ.
ಈ ಅವಘಡವು ಸ್ಟಲಿರ್ಂಗ್ ರಿವರ್ ರೆಸಾರ್ಟ್ ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಪಾಲಿಸದ ಪರಿಣಾಮವೇ ಸಂಭವಿಸಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಅಪಘಾತದ ಬಳಿಕ ಚಿಕಿತ್ಸೆ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವುದಾಗಿ ರೆಸಾರ್ಟ್ ಆಡಳಿತ ಭರವಸೆ ನೀಡಿದ್ದರೂ, ನಂತರ ಯಾವುದೇ ರೀತಿಯ ಆರ್ಥಿಕ ನೆರವಿಗೆ ಸ್ಪಂದಿಸಿಲ್ಲ ಎಂದು ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ರೆಸಾರ್ಟ್ ಮ್ಯಾನೇಜರ್, ಅಪಘಾತ ಸಂಭವಿಸಿರುವುದನ್ನು ಒಪ್ಪಿಕೊಂಡಿದ್ದು, ಇದು ಸಿಬ್ಬಂದಿಯ ನಿರ್ಲಕ್ಷ್ಯದಿಂದಲ್ಲ, ಆಕಸ್ಮಿಕವಾಗಿ ನಡೆದ ಘಟನೆ ಎಂದು ತಿಳಿಸಿದ್ದಾರೆ. ಶೀಘ್ರದಲ್ಲೇ ವಿಜಯಪುರಕ್ಕೆ ಬಂದು ಕುಟುಂಬದವರೊಂದಿಗೆ ಮಾತುಕತೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ.
ಎಂಜಾಯ್ ಮಾಡಲು ತೆರಳಿದ್ದ ಪ್ರವಾಸ ಕ್ಷಣಾರ್ಧದಲ್ಲಿ ದುರಂತವಾಗಿ ಪರಿಣಮಿಸಿದ್ದು, ಬದುಕಿನ ಉತ್ಸಾಹದಲ್ಲಿದ್ದ ಯುವಕ ಇದೀಗ ಆಸ್ಪತ್ರೆಯ ಹಾಸಿಗೆ ಹಿಡಿಯುವಂತಾಗಿದೆ. ಈ ಘಟನೆ ಸಾಹಸ ಕ್ರೀಡೆಗಳ ವೇಳೆ ಸುರಕ್ಷತಾ ಮಾನದಂಡಗಳ ಕಟ್ಟುನಿಟ್ಟಿನ ಅನುಷ್ಠಾನದ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.