Home ಜಿಲ್ಲೆ ಕಲಬುರಗಿ ಈಗ 1972 ರ ಬರಗಾಲಕ್ಕಿಂತ ಭೀಕರ ;ಸದನದ ಗಮನ ಸೆಳೆದ ಶಾಸಕ ಅಲ್ಲಮಪ್ರಭು ಪಾಟೀಲ್

ಈಗ 1972 ರ ಬರಗಾಲಕ್ಕಿಂತ ಭೀಕರ ;ಸದನದ ಗಮನ ಸೆಳೆದ ಶಾಸಕ ಅಲ್ಲಮಪ್ರಭು ಪಾಟೀಲ್

ಕಲಬುರಗಿ,ಸೆ.25: ಈ ಬಾರಿಯ ಬರಗಾಲ 6 ದಶಕಗಳ ಹಿಂದೆ ಕಾಡಿದ್ದ ಬಾಹತ್ತರ (1972) ರ ಬರಗಾಲಕ್ಕಿಂತ ಭಿನ್ನ ಹಾಗೂ ಭೀಕರ, ಈ ಬಾರಿ ಶೇ. 40 ರಷ್ಟೂ ಮಳೆ ಸುರಿದಿಲ್ಲ, ಅಂತರ್ಜಲ ಮಾಯವಾಗಿದೆ, ಬಾವಿಗಳು, ಕೊಳವೆ ಬಾವಿಗಳು ಬತ್ತಿ ಹೋಗಿವೆ. ಜನ- ಜಾನುವಾರು ನೀರಿಗಾಗಿ ಹಾಹಾಕಾರ ಎದುರಿಸುತ್ತಿದ್ದಾರೆಂದು ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ವರು ಬರಗಾಲ ಚರ್ಚೆಗೆ ಕರೆಯಲಾಗಿದ್ದ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿ ಭೀಕರ ಬರಗಾಲದ ಚಿತ್ರಣ ನೀಡಿ ಸರ್ಕಾರದ ಗಮನ ಸೆಳೆದರು.
ಸದನದಲ್ಲಿ ಗುರುವಾರ ಮಾತನಾಡಿದ ಶಾಸಕರು, ಜಿಲ್ಲೆಯಲ್ಲಿ ಮೊದಲು ಜೂನ್‍ನಲ್ಲಿ ಅಲ್ಪ ಮಳೆ ಬಂದಾಗ ಆಶೆಯಿಂದ ರೈತರು ಹೆಸರು, ಉದ್ದು, ಅಲಸಂದಿ, ಎಳ್ಳು ಬಿತ್ತಿದರು, ನಂತರ ಮಾಯವಾದ ಮಳೆ ಬರಲೇ ಇಲ್ಲ. ಮತ್ತೆ ಬಿತ್ತಿದ್ದ ಬೆಳೆ ಹರಗಿ ತೊಗರಿ ಬಿತ್ತಿದರೂ ಮಳೆ ಬರಲಿಲ್ಲ. ಹೀಗಾಗಿ 2 ಬಾರಿ ಬಿತ್ತಿ ಬಳಿಯಲ್ಲಿರುವ ಹಣ ಕಳೆದುಕೊಂಡಿದ್ದಾರೆಂದು ರೈತರ ಗೋಳು ಮನಮುಟ್ಟುವಂತೆ ವಿವರಿಸಿದರು.
ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಭೀಮೆ, ಗಂಡೋರಿ, ಬೆಣ್ಣೆತೊರಾ, ಮುಲ್ಲಾಮಾರಿ, ಅಮರ್ಜಾ ನಿಗಳು ಬತ್ತಿ ಬರಿದಾಗಿವೆ. ಈ ನದಿಯ ಅಣೆಕಟ್ಟೆ ಇರುವ ತೀರದಲ್ಲಿ ಗೋಶಾಲೆ ತೆರೆಯಬೇಕಿದೆ. ಮೇವು ಬ್ಯಾಂಕ್ ಆರಂಭಿಸಿ ರೈತರ ಜಾನುವಾರು ಸಂರಕ್ಷಣೆಯಾಗಬೇಕು. ರೈತರ ಹಾನಿಯಾದ ಬೆಳೆಯ ಸರ್ವೇ ಮಾಡಿ ತಕ್ಷಣ ಪರಿಹಾರ ನೀಡುವ ಕೆಲಸವಾಗಬೇಕು ಎಂದು ಅಲ್ಲಂಪ್ರಭು ಪಾಟೀಲರು ಸದನದಲ್ಲಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.