
ಬೀದರ, ಜೂ ೬: ಪರಿಸರದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಪ್ರೊ. ಎಸ್.ವಿ. ಕಲ್ಮಠ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ವಿವೇಕಾನಂದ ಬಡಾವಣೆಯ ಪಂಚಾಕ್ಷರ ನಿಲಯದಲ್ಲಿರುವ ‘ಕುಮಾರ ಕೃಪಾ ಕೋವಿಡ್ ಗೆದ್ದವರ ಕೈತೋಟ’ದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಾದ ಪ್ರವೀಣ ಹಾಗೂ ಗಣೇಶ ಅವರನ್ನು ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ. ಕಲ್ಮಠ, ಪೌರ ಕಾರ್ಮಿಕರು ಪ್ರತಿನಿತ್ಯ ಮನೆ ಮನೆಗೆ ತೆರಳಿ ಗೃಹ ಕಸವನ್ನು ಸಂಗ್ರಹಿಸಿ ಸಾಗಿಸುವುದರ ಜೊತೆಗೆ ಬೀದಿಗಳಲ್ಲಿ ಬಿದ್ದಿರುವ ಕೊಳಕು ಹಾಗೂ ದುರ್ವಾಸನೆಯ ಕಸವನ್ನು ಸಹ ಸ್ವಚ್ಛಗೊಳಿಸುತ್ತಾರೆ. ಅವರ ಶ್ರಮದಿಂದ ಮನೆ ಹಾಗೂ ಸುತ್ತಮುತ್ತಲಿನ ಪರಿಸರ ನೈರ್ಮಲ್ಯ ಕಾಪಾಡಲಾಗುತ್ತದೆ. ಅವರು ನಿರ್ವಹಿಸುವ ಸೇವೆಯನ್ನು ಯಾವುದೇ ಕಾರಣಕ್ಕೂ ಕೀಳಾಗಿ ಕಾಣಬಾರದು ಎಂದು ಹೇಳಿದರು.
ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪೌರ ಕಾರ್ಮಿಕರ ಪಾದ ತೊಳೆದು ಗೌರವ ಸಲ್ಲಿಸಿದ್ದನ್ನು ಸ್ಮರಿಸಿದ ಅವರು, ಸಮಾಜದಲ್ಲಿ ಪೌರ ಕಾರ್ಮಿಕರ ಸೇವೆಗೆ ನೀಡಬೇಕಾದ ಗೌರವದ ಪ್ರತೀಕವಾಗಿತ್ತು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಿವೃತ್ತ ಪಿಎಸ್‌ಐ ವಿಜಯಕುಮಾರ ಬೊಗಲೆ ಅವರು ಪೌರ ಕಾರ್ಮಿಕರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ರಾಜೇಶ್ವರಿ, ಶಾಂಭವಿ, ಸೂರ್ಯಕಾಂತ ಮಾಳಗೆ, ದಿಲೀಪಕುಮಾರ ಹುಲಸೂರೆ, ಬಬಲು, ಕಲ್ಮಠ ಕುಟುಂಬದ ಸದಸ್ಯರು ಹಾಗೂ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.

























