
ತುಮಕೂರು, ಜೂ. ೧೩- ಸಾರ್ವಜನಿಕವಾಗಿ ಎಸ್‌ಐಆರ್ ಕುರಿತು ಇರುವ ಗೊಂದಲಗಳನ್ನು ನಿವಾರಿಸುವಂತೆ ಒತ್ತಾಯಿಸಿ ತುಮಕೂರು ಜಿಲ್ಲಾ ಕಾಂಗ್ರೆಸ್‌ನ ಕಾನೂನು, ಮಾನವಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗದ ಜಿಲ್ಲಾಧ್ಯಕ್ಷ ಟಿ.ಎನ್. ಸುರೇಶ್ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪಸ್ವಾಮಿರವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಭಾರತ ಸಂವಿಧಾನ ನೀಡಿರುವ ಮತದಾನದ ಹಕ್ಕು ಈ ದೇಶದ ಎಲ್ಲರು ಪಡೆದುಕೊಳ್ಳುವಂತೆ ನೋಡಿಕೊಳ್ಳುವುದು ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಜವಬ್ದಾರಿ. ಆ೦ದರೆ ಎಸ್‌ಐಆರ್‌ನಿಂದ ಹಲವರನ್ನು ಮತದಾನದ ಹಕ್ಕಿನಿಂದ ತೆಗೆಯಲಾಗುತ್ತಿದೆ. ಬಿಎಲ್‌ಓಗಳು ಸರಿಯಾಗಿ ಸ್ಥಳ ಪರಿಶೀಲನೆ ಮಾಡದೇ ಮ್ಯಾಪಿಂಗ್ ಮಾಡಿದ್ದಾರೆ. ಇದರಿಂದ ತೊಂದರೆ ಆಗುವ ಸಾಧ್ಯತೆ ಇದೆ. ಪ್ರಸ್ತುತ ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಿದ್ದು, ಜನರಲ್ಲಿರುವ ಗೊಂದಲಗಳನ್ನು ನಿವಾರಿಸಬೇಕು. ಅರ್ಹ ಮತದಾರರು ಯಾವುದೇ ಕಾರಣಕ್ಕೂ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗದ ಜಿಲ್ಲಾಧ್ಯಕ್ಷ ಟಿ.ಎನ್. ಸುರೇಶ್ ಒತ್ತಾಯಿಸಿದರು.
ಚುನಾವಣಾ ಆಯೋಗ ಈ ಮ್ಯಾಪಿಂಗ್ ಕಾರ್ಯವನ್ನು ಮಾಡುವ ಮುನ್ನ ಬಿ.ಎಲ್.ಓ.ಗಳಿಗೆ ೨೦೦೨ರ ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ನೀಡಿ, ಅದರ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು. ಬಿ.ಎಲ್.ಓ.ಗಳು ಯಾವುದೋ ಒಂದು ವ್ಯಕ್ತಿಯ ಚುನಾವಣಾ ಗುರುತಿನ ಚೀಟಿಗೆ ಮಾಡಿರುವುದಿಲ್ಲ. ಮತ್ಯಾವುದೋ ವ್ಯಕ್ತಿಯ ಮಾಡಿರುತ್ತಾರೆ. ಪೋಷಕರ ಮಾಹಿತಿಯನ್ನು ಮ್ಯಾಪಿಂಗ್ ಮಾಡಬೇಕು. ೨೦೦೨ರಲ್ಲಿದ್ದ ವಿಧಾನಸಭಾ ಕ್ಷೇತ್ರಗಳು ೨೦೨೬ ರಲ್ಲಿ ಬದಲಾವಣೆ ಆಗಿರುವ ಪರಿಣಾಮ ಯಾವ ಯಾವ ಹಳ್ಳಿಗಳು, ಯಾವ ಯಾವ ವಿಧಾನಸಭಾ ಕ್ಷೇತ್ರಕ್ಕೆ ಸೇರಿಕೊಳ್ಳುತ್ತವೆ ಎಂದು ಸ್ವತಃ ಬಿ.ಎಲ್.ಓ.ಗಳಿಗೆ ಮಾಹಿತಿ ಇರುವುದಿಲ್ಲ ಎಂದು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.
ತಂದೆ-ತಾಯಿಗಳು ಒಂದೆಡೆ ಇದ್ದು, ಮಕ್ಕಳು ವಲಸೆ ಬಂದು ನಗರ ಪ್ರದೇಶಗಳಲ್ಲಿ ವಾಸವಿದ್ದು, ಮಕ್ಕಳಿಗೆ ೪೦ ವರ್ಷ ತುಂಬಿದ್ದರೆ ಚುನಾವಣಾ ಆಯೋಗವು ಸಿದ್ಧಪಡಿಸಿರುವ ಅಪ್ಲಿಕೇಷನ್‌ನಲ್ಲಿ ತೆಗೆದುಕೊಳ್ಳುವುದಿಲ್ಲ. ಇದನ್ನು ಸರಿಪಡಿಸಿಕೊಳ್ಳಲು ಕೇಳಿಕೊಳ್ಳುತ್ತೇವೆ. ಈಗಾಗಲೇ ೪೦ ವರ್ಷ ತುಂಬಿದ ಪ್ರಜೆಗಳು ೨೦೦೨ ರಲ್ಲಿ ಯಾವುದೇ ವಿಧಾನಸಭಾ ಕ್ಷೇತ್ರಗಳಲ್ಲಿ ಮತವನ್ನು ಚಲಾಯಿಸಿರುವುದಿಲ್ಲ ಮತ್ತು ಅವರಿಗೆ ಅಥವಾ ಬೇರೆ ರೀತಿಯಲ್ಲಿ ಮ್ಯಾಪಿಂಗ್ ಮಾಡಲು ಪ್ರೋಜನಿಯಾಗಿ ಅವಕಾಶವಿರುವುದಿಲ್ಲ. ಹೀಗಾಗಿ ಅವರು ಮತದಾರರ ಪಟ್ಟಿಯಿಂದ ವಂಚಿತರಾಗಿರುತ್ತಾರೆ. ಇದನ್ನು ಸರಿಪಡಿಸಿಕೊಳ್ಳಲು ಕೇಳಿಕೊಳ್ಳುತ್ತೇವೆ. ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಬಂದಿರತಕ್ಕಂತಹ ಹೆಣ್ಣು ಮಕ್ಕಳ ಚುನಾವಣಾ ಚೀಟಿಗಳು ಹಳ್ಳಿ ಹಳ್ಳಿಗಳ ಮಾಹಿತಿಗಳು ಬಿ.ಎಲ್.ಓ. ಗಳಿಗೆ ಇಲ್ಲದೆ ಇರುವುದರಿಂದ, ಐ.ಡಿ.ಗಳು ಡಿಲೀಟ್ ಆಗುವ ಸಂಭವವಿರುತ್ತದೆ ಎಂದು ಹೇಳಿದ್ದಾರೆ
ಬಿ.ಎಲ್.ಓ. ಗಳಿಗೆ ಚುನಾವಣಾ ಆಯೋಗವು ಖುದ್ದು ಸ್ಥಳಪರಿಶೀಲನೆಯನ್ನು ಮಾಡಿ, ವ್ಯಕ್ತಿಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಮ್ಯಾಪಿಂಗ್ ಮಾಡಬೇಕೆಂದು ಹೇಳಿದ್ದರೂ ಸಹ ಬಿ.ಎಲ್.ಓ.ಗಳು ಮಾಡಿರುವುದಿಲ್ಲ. ೨೦೦೨ ರಲ್ಲಿ ಚುನಾವಣಾ ಚೀಟಿಯಲ್ಲಿ ತಂದೆಯ ಹೆಸರು ಅಥವಾ ಅರ್ಜಿದಾರರ ಹೆಸರುಗಳು ತಿದ್ದುಪಡಿಯಾಗಿದ್ದು, ಅದನ್ನು ಮತ್ತೆ ೨೦೨೬ ರಲ್ಲಿ ಯಾವ ರೀತಿ ಮ್ಯಾಪಿಂಗ್ ಮಾಡಬೇಕೆಂದು ಬಿ.ಎಲ್.ಓ. ಗಳಿಗೆ ಮಾಹಿತಿ ಇರುವುದಿಲ್ಲ. ತಿದ್ದುಪಡಿಯಾಗಿರುವ ಚುನಾವಣಾ ಚೀಟಿಗಳಿಗೆ ಮತ್ತು ಪ್ರಸುತ ಇರುವಂತಹ ಚುನಾವಣಾ ಚೀಟಿಗಳಿಗೆ ವ್ಯತ್ಯಾಸ ಕಂಡು ಬರುವುದರಿಂದ, ವೋಟರ್ ಐ.ಡಿ.ಗಳು ಆಗುವ ಸಂಭವವಿರುತ್ತದೆ. ಈ ಗೊಂದಲ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ
ಬಿ.ಎಲ್.ಓ.ಗಳಿಗೆ ಸರಿಯಾದ ಮಾರ್ಗದರ್ಶನ ನೀಡಿ, ತರಬೇತಿಯನ್ನು ಕೊಟ್ಟು, ಮತದಾರರ ಪಟ್ಟಿ ಪರಿಷ್ಕರಣೆಯ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಲವು ಪದಾಧಿಕಾರಿಗಳು ಪಾಲ್ಗೊಂಡಿದ್ದರು.




























