
ಕೆಜಿಎಫ್, ಸೆ. ೧೮: ಕ್ಯಾಸಂಬಳ್ಳಿ ಸಮೀಪದ ರಾಮಪುರ ಗ್ರಾಮದ ತಿರುವಿನಲ್ಲಿ ಕೆಎಸ್‌ಆರ್ಟಿಸಿ ಬಸ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡ ಪ್ರಯಾಣಿಕರನ್ನು ಕೆಜಿಎಫ್ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆರ್.ಕೆ. ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಮೋಹನ್ ಕೃಷ್ಣ ಸಂತ್ವನೆ ಹೇಳಿದರು.
ಶಾಂತಿಪುರದಿಂದ ಕೆಜಿಎಫ್ಗೆ ಬರುತ್ತಿದ್ದ ಕೆಎಸ್‌ಆರ್ಟಿಸಿ ಬಸ್‌ನಲ್ಲಿ ಒಟ್ಟು ೪೩ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಅಪಘಾತದಲ್ಲಿ ೧೫ ಮಂದಿ ಗಾಯಗೊಂಡಿದ್ದಾರೆ.
ಅವರಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಅಪಘಾತದ ಸುದ್ದಿ ತಿಳಿದ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿದ ಮೋಹನ್ ಕೃಷ್ಣ, ಗಾಯಾಳುಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಸಂದರ್ಭದಲ್ಲಿ ಮಾತನಾಡಿದ ಅವರು, “ಮಾಧ್ಯಮಗಳು ಸತ್ಯದ ಪರ ಇದ್ದು, ವಾಸ್ತವಾಂಶವನ್ನು ಜನರಿಗೆ ತಿಳಿಸಬೇಕು.
ನಾನು ಸತ್ಯ ಹೇಳಲು ಮುಂದಾದರೆ ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮತದಾನದ ಕುರಿತು ಮಾತನಾಡಿದ ಅವರು, “ಮತದಾರರು ಮೊದಲು ಹಣ ಪಡೆದು ಮತ ಹಾಕುವ ಪದ್ಧತಿಯನ್ನು ಕೈಬಿಡಬೇಕು.
ಮಾಜಿ ಶಾಸಕ ಎಸ್. ರಾಜೇಂದ್ರನ್ ಅವರು ಮತದಾರರ ಬಗ್ಗೆ ಮಾತನಾಡಿರುವುದು ಸತ್ಯ’ ಎಂದು ಹೇಳಿದರು. ಈ ವೇಳೆ ಕೆಲವು ಮಾಧ್ಯಮಗಳು ಹಾಗು ಜನಪ್ರತಿನಿಧಿಗಳ ಕಾರ್ಯ ವೈಖರಿಯ ಕುರಿತೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಾರ್ವಜನಿಕ ಸಮಸ್ಯೆಗಳು ಹಾಗು ಜನರ ವಿಚಾರಗಳನ್ನು ವಾಸ್ತವಾಂಶದ ಆಧಾರದ ಮೇಲೆ ಜನರ ಮುಂದೆ ಇರಬೇಕು ಎಂದು ಒತ್ತಾಯಿಸಿದರು.




























