Home ಮುಖಪುಟ ಸುದ್ದಿ ಖಾಲಿ ನಿವೇಶನ ಸ್ವಚ್ಛತೆ : ಮಾಲೀಕರಿಗೆ ಆ.೨೭ ಗಡುವು

ಖಾಲಿ ನಿವೇಶನ ಸ್ವಚ್ಛತೆ : ಮಾಲೀಕರಿಗೆ ಆ.೨೭ ಗಡುವು

ಬೆಂಗಳೂರು, ಆ. ೨೫- ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಹಾಗೂ ಡೆಬ್ರಿಸ್ ರಾಶಿ ಹಾಕಿ ನಿರ್ಲಕ್ಷ್ಯ ವಹಿಸುವ ಸ್ವತ್ತಿನ ಮಾಲೀಕರ ವಿರುದ್ಧ ಬೆಂಗಳೂರು ಪೂರ್ವ ನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಆಗಸ್ಟ್ ೨೭ರೊಳಗೆ ಖಾಲಿ ನಿವೇಶನಗಳನ್ನು ಸ್ವಯಂಪ್ರೇರಿತವಾಗಿ ಸ್ವಚ್ಛಗೊಳಿಸದಿದ್ದರೆ, ಪಾಲಿಕೆಯೇ ತ್ಯಾಜ್ಯ ತೆರವುಗೊಳಿಸಿ ಅದರ ಸಂಪೂರ್ಣ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ಮಾಲೀಕರಿಂದ ವಸೂಲಿ ಮಾಡಲಿದೆ.


ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಂಬಂಧ ಆಯುಕ್ತ ಡಿ.ಎಸ್. ರಮೇಶ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಖಾಸಗಿ ಖಾಲಿ ನಿವೇಶನಗಳನ್ನು ಗುರುತಿಸುವುದು, ಮಾಲೀಕರಿಗೆ ನೋಟಿಸ್ ನೀಡುವುದು ಹಾಗೂ ತ್ಯಾಜ್ಯ ತೆರವು ಮತ್ತು ಸಾಗಾಣಿಕೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.


ಈ ಹಿಂದೆ ಆಗಸ್ಟ್ ೨೨ರೊಳಗೆ ತ್ಯಾಜ್ಯ ತೆರವುಗೊಳಿಸುವಂತೆ ಮಾಲೀಕರಿಗೆ ಸೂಚಿಸಲಾಗಿತ್ತು. ಆದರೆ ಬಹುತೇಕ ಖಾಲಿ ನಿವೇಶನಗಳಲ್ಲಿ ಇನ್ನೂ ಡೆಬ್ರಿಸ್ ತೆರವುಗೊಳಿಸದಿರುವುದು ಪಾಲಿಕೆಯ ಗಮನಕ್ಕೆ ಬಂದಿದೆ. ಹೀಗಾಗಿ ಆಗಸ್ಟ್ ೨೭ರಿಂದ ಸಾಮೂಹಿಕವಾಗಿ ತ್ಯಾಜ್ಯ ವಿಲೇವಾರಿ ಕಾರ್ಯಾಚರಣೆ ಆರಂಭಿಸಲು ಪಾಲಿಕೆ ಸಿದ್ಧತೆ ನಡೆಸಿದೆ.

ಎಷ್ಟು ವೆಚ್ಚ ಬೀಳಲಿದೆ?
ನಿವೇಶನದ ವಿಸ್ತೀರ್ಣ ಹಾಗೂ ತಡೆಗೋಡೆ ಇರುವಿಕೆ ಆಧರಿಸಿ ಸ್ವಚ್ಛತಾ ವೆಚ್ಚ ನಿಗದಿಪಡಿಸಲಾಗಿದೆ. ಉದಾಹರಣೆಗೆ ೨೦೩೦ ಅಡಿ ನಿವೇಶನದ ತ್ಯಾಜ್ಯ ತೆರವಿಗೆ ಸ್ವಚ್ಛತಾ ಮತ್ತು ಸಾಗಾಣಿಕೆ ವೆಚ್ಚ ಸೇರಿ ಸಾವಿರಾರು ರೂಪಾಯಿ ವೆಚ್ಚವಾಗಲಿದೆ. ೫೦೮೦ ಅಡಿ ನಿವೇಶನದಲ್ಲಿ ಸಾಗಾಣಿಕೆ ವೆಚ್ಚವೇ ೧.೨೮ ಲಕ್ಷದವರೆಗೆ ತಲುಪಲಿದೆ. ಈ ವೆಚ್ಚವನ್ನು ತಪ್ಪಿಸಿಕೊಳ್ಳಲು ಮಾಲೀಕರು ಗಡುವಿನೊಳಗೆ ಸ್ವಚ್ಛತೆ ಕೈಗೊಳ್ಳುವಂತೆ ಆಯುಕ್ತರು ಮನವಿ ಮಾಡಿದ್ದಾರೆ.

ಅಧಿಕಾರಿಗಳ ವಿಶೇಷ ತಂಡ:
ತ್ಯಾಜ್ಯ ತೆರವು ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಲಯ ಜಂಟಿ ಆಯುಕ್ತರು ಮತ್ತು ಮುಖ್ಯ ಅಭಿಯಂತರರ ಮೇಲ್ವಿಚಾರಣೆಯಲ್ಲಿ ವಿಶೇಷ ತಂಡ ರಚಿಸಲಾಗಿದೆ. ಸಹಾಯಕ ಪ್ರಧಾನ ವ್ಯವಸ್ಥಾಪಕರು, ಕಂದಾಯ ಅಧಿಕಾರಿಗಳು, ವಾರ್ಡ್ ಸಹಾಯಕ ಅಭಿಯಂತರರು, ಕಾರ್ಯಪಾಲಕ ಹಾಗೂ ಅಧೀಕ್ಷಕ ಅಭಿಯಂತರರು ಸೇರಿದಂತೆ ಹಲವು ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದ್ದಾರೆ.


“ಆಗಸ್ಟ್ ೨೭ರೊಳಗೆ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿಕೊಂಡರೆ ಪಾಲಿಕೆಯ ಕ್ರಮ ಮತ್ತು ಹೆಚ್ಚುವರಿ ವೆಚ್ಚದಿಂದ ಪಾರಾಗಬಹುದು. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಆಯುಕ್ತ ಡಿ.ಎಸ್. ರಮೇಶ್ ಮನವಿ ಮಾಡಿದ್ದಾರೆ.


ಸಭೆಯಲ್ಲಿ ಜಂಟಿ ಆಯುಕ್ತೆ ಡಾ. ದಾಕ್ಷಾಯಿಣಿ ಕೆ., ಮುಖ್ಯ ಅಭಿಯಂತರರಾದ ಎಂ. ಲೋಕೇಶ್, ಕೃಷ್ಣಮೂರ್ತಿ ಹಾಗೂ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.


ಸಂಜೆವಾಣಿ ವಿಶೇಷ: ನಗರದ ಸ್ವಚ್ಛತೆ ಕೇವಲ ಪಾಲಿಕೆಯ ಜವಾಬ್ದಾರಿಯಲ್ಲ, ಖಾಸಗಿ ನಿವೇಶನಗಳ ಮಾಲೀಕರಿಗೂ ಹೊಣೆಗಾರಿಕೆ ಇದೆ ಎಂಬ ಸಂದೇಶವನ್ನು ಪೂರ್ವ ನಗರ ಪಾಲಿಕೆ ಈ ಕಾರ್ಯಾಚರಣೆಯ ಮೂಲಕ ಸ್ಪಷ್ಟಪಡಿಸಿದೆ.