
ಬೀದರ, ಅ.21: ವಸತಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಡಿ ಗ್ರೂಪ್ ಸಿಬ್ಬಂದಿಗಳ ಮೇಲೆ ಅತ್ಯಂತ ಮಹತ್ವಪೂರ್ಣವಾದ ಹೊಣೆಗಾರಿಕೆಯಿದೆ. ಅದನ್ನು ಸಮರ್ಥವಾಗಿ ನಿಭಾಯಿಸಿದಾಗ ಮಾತ್ರ ವಸತಿ ಶಾಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಿ ಶಾಲೆಗೆ ಹೆಸರು ತರುವಂತೆ ಮಾಡಬೇಕೆಂದು ಸಮಾಜ ಕಲ್ಯಾಣ ಇಲಾಖೆ ಬೀದರನ ಉಪ ನಿರ್ದೇಶಕರಾದ ಡಾ. ಯೋಗೇಶ ಎಸ್ ಬಿ ನುಡಿದರು. ಬೀದರ ಜಿಲ್ಲೆಯ ಕ್ರೈಸ್ ವಸತಿ ಶಾಲೆಗಳ ಮುಖ್ಯ ಅಡುಗೆಯವರು ಮತ್ತು ಅಡುಗೆ ಸಹಾಯಕರು, ಸ್ವಚ್ಛತಾ ಸಿಬ್ಬಂದಿ ಜವಾನ ಹಾಗೂ ಕಾವಲುಗಾರರ ಸಿಬ್ಬಂದಿಗಳಿಗೆ ಬಸವ ಕೇಂದ್ರ ಬೀದರಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಗಾರ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಇತಿಚೆಗೆ ಸರಿಯಾಗಿ ಕಾರ್ಯ ನಿರ್ವಹಿಸದ ಬಗ್ಗೆ ಅನೇಕ ದೂರುಗಳು ಸ್ವೀಕೃತವಾಗುತ್ತಿವೆ. ಇದರಿಂದ ಶಾಲೆಗಳ ಹೆಸರು ಕೆಡುತ್ತವೆ. ರಾಜ್ಯ ಮಟ್ಟದಲ್ಲಿ ಉತ್ತಮ ಶೈಕ್ಷಣಿಕ ಫಲಿತಾಂಶ ನೀಡಿಯೂ ಇಂತಹ ನಕಾರಾತ್ಮಕ ಸುದ್ದಿ ಬಂದರೆ ಸಂಸ್ಥೆಯ ಬಗ್ಗೆ ವ್ಯತಿರಿಕ್ತ ಅಭಿಪ್ರಾಯ ಸೃಷ್ಠಿಯಾಗುತ್ತದೆ. ಹೀಗಾಗಿ ಅಂತಹದಕ್ಕೆ ಅವಕಾಶ ನೀಡಬಾರದೆಂದು ಇಂದು ಪ್ರಥಮ ಬಾರಿಗೆ ಇಂತಹ ಕಾರ್ಯಗಾರ ಆಯೋಜನೆ ಮಾಡಿ ತರಬೇತಿ ನೀಡಲಾಗುತ್ತಿದೆ. ಸಿಬ್ಬಂದಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ನುಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೀದರನ ಜಿಲ್ಲಾ ಅಧಿಕಾರಿಗಳಾದ ಶ್ರೀ ರಾಘವೇಂದ್ರ ಅವರು ಮಾತನಾಡಿ ಸಂಸ್ಥೆಯ ಜೀವಾಳವೆ ಡಿ ಗ್ರೂಪ್ ಸಿಬ್ಬಂದಿ. ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಾ ಸಿಬ್ಬಂದಿ, ಕಾವಲುಗಾರರು ಹಾಗೂ ಡಿ ಗ್ರೂಪ್ ಸಿಬ್ಬಂದಿಗಳಿಲ್ಲದೆ ಒಂದು ದಿನ ಶಾಲೆಗಳನ್ನು ನಡೆಸಲಾಗದು. ಹೀಗಾಗಿ ಈ ಸಿಬ್ಬಂದಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗಿರೀಶ ರಂಜೋಳಕರ ಮಾತನಾಡಿ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ. ಹೀಗಾಗಿ ಉತ್ತಮ ಕಾರ್ಯ ನಿರ್ವಹಿಸಲು ಸಲಹೆ ನೀಡಿದರು.
ಇಂಡಿಯನ್ ಮೇಡಿಕಲ್ ಅಸೋಷಿಯೇಷನ್ ಬೀದರನ ಅಧ್ಯಕ್ಷರಾದ ಡಾ. ಕಿರಣ ಪಾಟೀಲ ವಸತಿ ಶಾಲೆಗಳ ಸಿಬ್ಬಂದಿಯ ವೈಯಕ್ತಿಕ ಆರೋಗ್ಯ ಮತ್ತು ಟೆಲಿ ಮೆಡಿಷನ್ & ವೈಯಕ್ತಿಕ ಸ್ವಚ್ಛತೆ , ತುರ್ತು ಪರಿಸ್ಥಿತಿ ನಿರ್ವಹಣೆ ಬಗ್ಗೆ ಮಾತನಾಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕರಾದ ಶ್ರೀಮತಿ ಸುರೇಖಾ ಸ್ವಾಮಿ ಮಕ್ಕಳ ಸುರಕ್ಷತೆ ಮತ್ತು ಪೆÇೀಕ್ಸೋ ಕಾಯ್ದೆ ಹಾಗೂ ಡಿ ಗ್ರೂಪ್ ಮತ್ತು ವಾರ್ಡನ್ ರವರ ಜವಾಬ್ದಾರಿಗಳು ಕುರಿತು ಮಾತನಾಡಿದರು. ಆಹಾರ ನಿಗಮ ಅಧಿಕಾರಿಗಳಾದ ಸೂರ್ಯಕಾಂತ ಟೋಣಪೆ ಅಕ್ಕಿ ಗೋಧಿ ಮತ್ತು ಇತರೆ ಧಾನ್ಯಗಳ ಸಂಗ್ರಹಣೆ ವಿಧಾನದ ಬಗ್ಗೆ ಮಾತನಾಡಿದರು. ಇಂದಿರಾಗಾಂಧಿ ವಸತಿ ಶಾಲೆ, ಬಲ್ಲೂರ ನಿಲಯಪಾಲಕರಾದ ಶ್ರೀಮಂತ ಸಪಾಟೆ ಅಡುಗೆ ಮನೆ, ವಸತಿ ನಿಲಯ ಕೋಣೆಗಳ , ಶೌಚಾಲಯಗಳ, ಸ್ನಾನ ಗೃಹ ಮತ್ತು ಶಾಲಾವರಣ ಸ್ವಚ್ಛತೆ ಮತ್ತು ನಿರ್ವಹಣೆ ಮತ್ತು ಸಮವಸ್ತ್ರ ಧರಿಸುವಿಕೆ ಹಾಗೂ ನೈರ್ಮಲ್ಯ ಕಾಪಾಡುವಿಕೆ ಬಗ್ಗೆ ಮಾತನಾಡಿದರು. ವಸತಿ ಶಾಲೆಯಲ್ಲಿ ಅಗ್ನಿ ಸುರಕ್ಷತೆ, ಬೆಂಕಿ ಅವಘಡಗಳ ತಡೆಗಟ್ಟುವಿಕೆಯಲ್ಲಿ ಅಗ್ನಿ ಉಪಕರಣಗಳ ಬಳಕೆ ಮತ್ತು ತುರ್ತು ಪರಿಸ್ಥಿಯಲ್ಲಿ ವಿದ್ಯಾರ್ಥಿಗಳ ರಕ್ಷಣೆ ಬಗ್ಗೆ ಅಗ್ನಿ ಶಾಮಕ ಇಲಾಖೆಯ ಅಧಿಕಾರಿ ನಾರಂದ ಸೋನಕರ ಮಾತನಾಡಿ ಅಣಕು ಅಗ್ನಿ ಅವಘಡದ ತರಬೇತಿ ನೀಡಿದರು.
ಕ್ರೈಸ್ ಜಿಲ್ಲಾ ಸಮನ್ವಯಾಧಿಕಾರಿ ಶರಣಪ್ಪಾ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ರವೀಂದ್ರ ಚಟ್ನಳ್ಳಿ ಸ್ವಾಗತಿಸಿದರು. ಚನ್ನಬಸವ ಹೇಡೆ ವಂದಿಸಿದರು. ದೇವಿದಾಸ ಜೋಶಿ ನಿರೂಪಿಸಿದರು.
ಜಿಲ್ಲೆಯ ಕ್ರೈಸ್ ವಸತಿ ಶಾಲೆಗಳ ಹೊರಸಂಪನ್ಮೂಲ ಸಿಬ್ಬಂದಿಗಳು ಪಾಲ್ಗೊಂಡಿದ್ದರು.






















