
ಸಂಜೆವಾಣಿ ವಾರ್ತೆ,
ವಿಜಯಪುರ, ಆ. ೩೦: ‘ನನಗೆ ಸಚಿವ ಸ್ಥಾನ ತಪ್ಪಿಸಿದ್ದು ಸಚಿವ ಎಂ.ಬಿ. ಪಾಟೀಲರು’ ಎಂದು ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಮಾಡಿರುವ ಆರೋಪಕ್ಕೆ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘ಸಿ.ಎಸ್. ನಾಡಗೌಡರು ನಾಟಕ ಮಾಡುವುದರಲ್ಲಿ ನಂಬರ್ ಒನ್. ಅವರ ನಾಟಕವನ್ನು ಯಾರೂ ನಂಬಬಾರದು. ಏಕೆಂದರೆ ಅವರು ಸಂದರ್ಭಕ್ಕೆ ತಕ್ಕಂತೆ ತಮ್ಮ ನಿಲುವು ಬದಲಾಯಿಸುತ್ತಾರೆ’ ಎಂದು ನಡಹಳ್ಳಿ ಟೀಕಿಸಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ೨೦೧೩ರಲ್ಲಿ ಎಂ.ಬಿ. ಪಾಟೀಲರು ನೀರಾವರಿ ಸಚಿವರಾಗುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದವರು ಯಾರು? ಎಂದು ಪ್ರಶ್ನಿಸಿದರು.
ಆಗ ಸಿ.ಎಸ್. ನಾಡಗೌಡ, ಶಿವಾನಂದ ಪಾಟೀಲ ಹಾಗೂ ಯಶವಂತರಾಯಗೌಡ ಪಾಟೀಲರು ಎಂ.ಬಿ. ಪಾಟೀಲರು ಸಚಿವರಾಗುವುದಕ್ಕೆ ವಿರೋಧಿಸಿದ್ದರು. ಇದನ್ನು ನೋಡಿದ್ದ ತಾನು ಮುಂದೆ ನಾಡಗೌಡರು ಹಾಗೂ ಎಂ.ಬಿ. ಪಾಟೀಲರು ಎಂದಿಗೂ ಒಂದಾಗುವುದಿಲ್ಲ ಎಂದುಕೊAಡಿದ್ದೆ ಎಂದರು.
ಆದರೆ, ಬಳಿಕ ನಡೆದ ಬಿ.ಎಂ. ಪಾಟೀಲರ ಸ್ಮರಣಾ ಕಾರ್ಯಕ್ರಮದಲ್ಲಿ ಇದೇ ಸಿ.ಎಸ್. ನಾಡಗೌಡರು ಎಂ.ಬಿ. ಪಾಟೀಲರನ್ನು ಹೊಗಳಿ ಮಾತನಾಡಿದ್ದರು. ‘ಎಂ.ಬಿ. ಪಾಟೀಲರ ತಂದೆ ಬಿ.ಎಂ. ಪಾಟೀಲರ ಋಣವನ್ನು ನೂರು ಜನ್ಮಕ್ಕೂ ತೀರಿಸಲು ಸಾಧ್ಯವಿಲ್ಲ’ ಎಂದು ನಾಡಗೌಡರು ಭಾಷಣ ಮಾಡಿದ್ದರು. ಇದನ್ನು ಕಂಡು ತಮಗೆ ಆಶ್ಚರ್ಯವಾಗಿತ್ತು ಎಂದು ನಡಹಳ್ಳಿ ಹೇಳಿದರು.
‘೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಸಿ.ಎಸ್. ನಾಡಗೌಡರಿಗೆ ಎಂ.ಬಿ. ಪಾಟೀಲರು ಎಷ್ಟು ಸಹಾಯ ಮಾಡಿದರು? ಎಷ್ಟು ಕೋಟಿ ರೂಪಾಯಿ ಹಣ ನೀಡಿದರು ಎಂಬುದನ್ನು ನಾಡಗೌಡರೇ ಬಹಿರಂಗಪಡಿಸಲಿ’ ಎಂದು ನಡಹಳ್ಳಿ ಸವಾಲು ಹಾಕಿದರು.
ತಾವು ಎಂ.ಬಿ. ಪಾಟೀಲರು ಸೇರಿದಂತೆ ಯಾರ ವಿರುದ್ಧವೂ ವೈಯಕ್ತಿಕ ವಿರೋಧ ಹೊಂದಿಲ್ಲ. ವಿಷಯಾಧಾರಿತವಾಗಿ ಹೋರಾಟ ನಡೆಸಿದ್ದೇನೆ, ಮುಂದೆಯೂ ವಿಷಯಾಧಾರಿತ ಹೋರಾಟ ಮುಂದುವರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
‘ಎಂ.ಬಿ. ಪಾಟೀಲರು ಮೊದಲ ಬಾರಿ ಸಚಿವರಾಗುವ ಸಂದರ್ಭದಲ್ಲಿ ನಾನು ಕಾಂಗ್ರೆಸ್‌ನಲ್ಲೇ ಇದ್ದೆ. ಆಗಲೂ ಇದೇ ಸಿ.ಎಸ್. ನಾಡಗೌಡರು ಅವರ ಸಚಿವ ಸ್ಥಾನಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಕಳೆದ ಬಾರಿ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಸದ್ಯ ನಾನು ಕಾಂಗ್ರೆಸ್‌ನಲ್ಲಿಲ್ಲ; ಬಿಜೆಪಿಯಲ್ಲಿದ್ದೇನೆ’ ಎಂದು ನಡಹಳ್ಳಿ ಹೇಳಿದರು.
ನಾಡಗೌಡರು ಪದೇ ಪದೇ ತಮ್ಮ ನಿಲುವು ಬದಲಾಯಿಸುವುದರಿಂದ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬಾರದು. ನಾಡಗೌಡರ ನಾಟಕವನ್ನು ಜನರು ನಂಬಬಾರದು ಎಂದು ಎ.ಎಸ್. ಪಾಟೀಲ ನಡಹಳ್ಳಿ ವಾಗ್ದಾಳಿ ನಡೆಸಿದರು.





























