
ಕಲಬುರಗಿ, ಏ.28: ವಿದ್ಯುತ್ ವ್ಯತ್ಯಯ ಹಾಗೂ ಕೆಟ್ಟುಹೋದ ಟ್ರಾನ್ಸಫಾರ್ಮರ್‍ಗಳ ತ್ವರಿತ ಬದಲಾವಣೆಯಲ್ಲಿ ವಿಳಂಬವಾಗುತ್ತಿರುವದರಿಂದ ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ ಅವರ ಅಧ್ಯಕ್ಷತೆಯಲ್ಲಿ ಜೆಸ್ಕಾಂ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಲಾಯಿತು.
ಕಲಬುರಗಿ ಗ್ರಾಮೀಣ, ಆಳಂದ, ಆಫಜಲ್ಪುರ್, ಕಾಳಗಿ, ಫರತಾಬಾದ್, ಹೇರೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಹಾಗೂ ಟ್ರಾನ್ಸಫಾರ್ಮರ್ ದೋಷಗಳ ಸಮಸ್ಯೆ ಗಂಭೀರವಾಗಿ ಎದುರಾಗುತ್ತಿರುವುದನ್ನು ಗಮನಿಸಿ, ಈ ಸಭೆ ಕರೆಯಲಾಗಿತ್ತು.ಸಭೆಯಲ್ಲಿ, ಕೆಟ್ಟುಹೋದ ಟ್ರಾನ್ಸಫಾರ್ಮರ್‍ಗಳನ್ನು ತಕ್ಷಣ ಬದಲಾಯಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ರೈತರಿಂದ ಯಾವುದೇ ರೀತಿಯ ಹಣವನ್ನು ಸ್ವೀಕರಿಸಿದ್ದೇ ಆದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೇಸಿಗೆ ತಾಪಮಾನ ಹೆಚ್ಚಿರುವ ಹಿನ್ನೆಲೆಯಲ್ಲಿ ನೀರಿನ ಅಭಾವದಿಂದ ಬೆಳೆಗಳು ಒಣಗದಂತೆ ತಡೆಯಲು, ಟ್ರಾನ್ಸಫಾರ್ಮರ್ ಬದಲಾವಣೆಯನ್ನು ತುರ್ತುವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಯಿತು.
ಇದೇ ವೇಳೆ, ರೈತರಿಗೆ ಸರ್ಕಾರದಿಂದ ವಿದ್ಯುತ್ ಸೌಲಭ್ಯ ನೀಡಲಾಗುತ್ತಿರುವುದರಿಂದ, ಅನಧಿಕೃತವಾಗಿ ವಿದ್ಯುತ್ ಬಳಸಬಾರದು ಎಂದು ಮನವಿ ಮಾಡಿದರು. ಅನಧಿಕೃತ ಸಂಪರ್ಕದಿಂದ ಟ್ರಾನ್ಸಫಾರ್ಮರ್‍ಗಳ ಮೇಲೆ ಹೆಚ್ಚುವರಿ ಒತ್ತಡ ಬಂದು ಅವು ಪದೇ ಪದೇ ಕೆಟ್ಟುಹೋಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜೆಸ್ಕಾಂನ ನಿರ್ದೇಶಕ (ತಾಂತ್ರಿಕ) ಚಂದ್ರಶೇಖರ್ ಪಾಟೀಲ್, ಮುಖ್ಯ ಹಣಕಾಸು ಅಧಿಕಾರಿ ಸೇರಿದಂತೆ ಸಂಸ್ಥೆಯ ವ್ಯಾಪ್ತಿಯ ಎಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್‍ಗಳು ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‍ಗಳು ಭಾಗವಹಿಸಿದರು.






















