
ಯಾದಗಿರಿ :ಜೂ.13:ತಾಲೂಕಿನ ಬಾಚವಾರ ಗ್ರಾಮದಲ್ಲಿ ನಡೆದಿರುವ ಕುಟುಂಬ ಕಲಹವೊಂದು ಇದೀಗ ಭೀಕರ ಸ್ವರೂಪ ಪಡೆದುಕೊಂಡಿದ್ದು, ವ್ಯಕ್ತಿಯೊಬ್ಬರ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಪ್ರಕರಣ ಗ್ರಾಮಸ್ಥರಲ್ಲಿ ಆತಂಕ ಹಾಗೂ ಆಕ್ರೋಶದ ವಾತಾವರಣವನ್ನು ನಿರ್ಮಿಸಿದೆ.
ಗ್ರಾಮದ ನಿವಾಸಿ ಭೀಮರಾಯ ನಾಯ್ಕಲ್ ಎಂಬುವರ ಮೇಲೆ ಅವರದೇ ಕುಟುಂಬದ ಸದಸ್ಯರಾದ ಪತ್ನಿ, ಅತ್ತೆ ಹಾಗೂ ಇಬ್ಬರು ಪುತ್ರರು ಸೇರಿಕೊಂಡು ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮಂಗಳವಾರ ತಡರಾತ್ರಿ ಸಂಭವಿಸಿದ ಈ ಘಟನೆ ವೇಳೆ ಭೀಮರಾಯ ನಾಯ್ಕಲ್ ಅವರಿಗೆ ತಲೆ, ಮುಖ ಹಾಗೂ ದೇಹದ ವಿವಿಧ ಭಾಗಗಳಲ್ಲಿ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅಪಾರ ಪ್ರಮಾಣದ ರಕ್ತಸ್ರಾವ ಉಂಟಾಗಿದೆ. ಹಲ್ಲೆಯಿಂದ ಅಸ್ವಸ್ಥಗೊಂಡ ಅವರನ್ನು ಸ್ಥಳೀಯರು ಹಾಗೂ ಸಂಬಂಧಿಕರು ತಕ್ಷಣವೇ ರಕ್ಷಿಸಿ ತುರ್ತು ಚಿಕಿತ್ಸೆಗಾಗಿ ಯಾದಗಿರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಕುಟುಂಬದ ಆಂತರಿಕ ಭಿನ್ನಾಭಿಪ್ರಾಯ, ದೀರ್ಘಕಾಲದ ಮನಸ್ತಾಪ ಹಾಗೂ ವೈಯಕ್ತಿಕ ವಿಚಾರಗಳೇ ಈ ಘೋರ ಘಟನೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ಬಳಿಕ ಬಾಚವಾರ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮನುಷ್ಯ ಸಂಬಂಧಗಳಲ್ಲೇ ಉಂಟಾದ ವೈಮನಸ್ಸು ಹಿಂಸಾತ್ಮಕ ರೂಪ ಪಡೆದುಕೊಂಡಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಪ್ರಕರಣದ ಕುರಿತು ಪೆÇಲೀಸರು ಮಾಹಿತಿ ಸಂಗ್ರಹಿಸಿ ತನಿಖಾ ಪ್ರಕ್ರಿಯೆ ಆರಂಭಿಸಿದ್ದು, ಘಟನೆಯ ಸಂಪೂರ್ಣ ಸತ್ಯಾಸತ್ಯತೆ ತನಿಖೆಯ ಬಳಿಕವೇ ಬಹಿರಂಗವಾಗಲಿದೆ.

























