
ಬೀದರ:ಜು.8: ರಕ್ತದಾನ ಇನ್ನೊಬ್ಬರಿಗೆ ಹೊಸ ಜೀವನ ನೀಡುವ ಮಹಾದಾನವಾಗಿದೆ. ಇನ್ನೊಬ್ಬರ ಜೀವ ಉಳಿಸುವುದಕ್ಕಾಗಿ ರಕ್ತದಾನ ಮಾಡಲು ಯುವಸಮೂಹ ಮುಂದೆ ಬರಬೇಕು ಎಂದು ಹಿರಿಯ ರೋಟೆರಿಯನ್ ಹಾವಶೆಟ್ಟಿ ಪಾಟೀಲ್ ಕರೆ ನೀಡಿದರು.
ನಗರದ ಐಎಂಎ ಹಾಲ್ನಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ವತಿಯಿಂದ ರೋಟರಿ ಹೊಸ ಪದಾಧಿಕಾರಿಗಳ ನೇಮಕದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ದಾನ ಮಾಡಿದ ರಕ್ತ ಹಲವು ಜೀವಗಳನ್ನು ಉಳಿಸಬಲ್ಲದು. ಆದರೆ ರಕ್ತದಾನಿಗಳಿಗೆ ಯಾವುದೇ ಹಾನಿಯಾಗಲ್ಲ. ನಿಯಮಿತವಾಗಿ ರಕ್ತದಾನ ಮಾಡುವುದು ಆರೋಗ್ಯದ ದೃಷ್ಟಿಯಿಂದ ಹಲವು ಲಾಭಗಳಿವೆ. ನಮ್ಮ ಸಣ್ಣ ನಿರ್ಧಾರವು ಮತ್ತೊಬ್ಬರ ಜೀವ ಉಳಿಸುವ ಮಹತ್ವದ ಹೆಜ್ಜೆಯಾಗುತ್ತದೆ ಎಂದು ರಕ್ತದಾನಿಗಳಿಗೆ ಪ್ರೇರಣೆ ನೀಡಿದರು.
ರೋಟರಿ ಸಂಸ್ಥೆ ವಿಶ್ವದಾದ್ಯಂತ ಮಾನವ ಸೇವೆಗೆ ಸಮರ್ಪಿತವಾಗಿ ಕೆಲಸ ಮಾಡುತ್ತಿದೆ. ಶಿಕ್ಷಣ, ಆರೋಗ್ಯ, ಸ್ವಚ್ಛತೆ, ಪರಿಸರ, ಸ್ತ್ರೀ ಸಬಲೀಕರಣ, ಕುಡಿಯುವ ನೀರು ಸೇರಿ ಅನೇಕ ಕ್ಷೇತ್ರಗಳಲ್ಲಿ ರೋಟರಿ ಕ್ಲಬ್ ಸಮಾಜಮುಖಿ ಯೋಜನೆ ಯಶಸ್ವಿಯಾಗಿ ಜಾರಿಗೆ ತರುತ್ತಿದೆ. ಜನಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಜಿಲ್ಲೆಯಲ್ಲಿ ರೋಟರಿ ಸಂಸ್ಥೆಗಳು ನಿರಂತರ ನಾನಾ ಚಟುವಟಿಕೆ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಅನೀಲಕುಮಾರ ಬಿರಾದಾರ ಮಾತನಾಡಿ, ಬರುವ ಒಂದು ವರ್ಷದ ಅವಧಿಯಲ್ಲಿ ವಿವಿಧ ಸಮಾಜ ಪರವಾದ ಕಾರ್ಯಚಟುವಟಿಕೆ ನಡೆಸಲು ನಿರ್ಧರಿಸಲಾಗಿದೆ. ರೋಟರಿ ಪದಾಧಿಕಾರಿಗಳ ಪದಗ್ರಹಣ ಬಳಿಕ ಒಂದು ವರ್ಷದ ಕಾರ್ಯಚಟುವಟಿಕೆ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ರೋಟರಿ ಕಾರ್ಯದರ್ಶಿ ಸಂಗಮೇಶ ಮಮಶೆಟ್ಟಿ, ಖಜಾಂಚಿ ಅನೀಲ ಮಸೂದಿ, ಪ್ರಮುಖರಾದ ಪ್ರಕಾಶ ಟೊಣ್ಣೆ, ಅಮರ್ ಡೊಳ್ಳಿ, ಸೋಮಶೇಖರ ಪಾಟೀಲ್, ಸುರೇಶ ಚನ್ನಶೆಟ್ಟಿ, ಶಿವಕುಮಾರ ಯಲಾಲ, ಚಂದ್ರಕಾಂತ ಕಾಡಾದಿ, ಕೃಪಾಸಿಂಧು ಪಾಟೀಲ್, ಶಂಕರರಾವ ಕೊಟ್ಟರಕಿ, ಡಾ.ರಾಜಶೇಖರ ಸೇಡಂಕರ್, ರವಿಕಿರಣ ಪೆÇಬ್ಬಾ, ಡಾ.ಸಚಿನ್ ಪಾಟೀಲ್ ಇತರರಿದ್ದರು. ಬ್ರಿಮ್ಸ್ ರಕ್ತನಿಧಿ ಕೇಂದ್ರಕ್ಕೆ ರಕ್ತ ಹಸ್ತಾಂತರಿಸಲಾಯಿತು. ರೋಟರಿ ಸದಸ್ಯರು ಸೇರಿ ಯುವಕರು ಸುಮಾರು 25 ಯೂನಿಟ್ ರಕ್ತದಾನ ಮಾಡಿದರು






























