Home ಜಿಲ್ಲೆ ಪ್ರಜಾಸೇವೆಯಿಂದ ಬಿಜೆಪಿ ಬುಡ ಅಲುಗಾಡುತ್ತಿದೆ – ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿಂದ ಪಾದಯಾತ್ರೆ : ಸಚಿವ ಲಕ್ಷ್ಮಣ...

ಪ್ರಜಾಸೇವೆಯಿಂದ ಬಿಜೆಪಿ ಬುಡ ಅಲುಗಾಡುತ್ತಿದೆ – ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿಂದ ಪಾದಯಾತ್ರೆ : ಸಚಿವ ಲಕ್ಷ್ಮಣ ಸವದಿ

ಅಥಣಿ : ರಾಜ್ಯದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನೇಕ ಜನಪರ ಹಾಗೂ ಅಭಿವೃದ್ಧಿ ಪರವಾದ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದೇವೆ. ಪ್ರಜಾಸೇವೆ ಅಭಿಯಾನ ಆರಂಭಿಸಿರುವುದರಿಂದ ಬಿಜೆಪಿಯವರ ಬುಡ ಅಲುಗಾಡುತ್ತಿದೆ. ಬಿಜೆಪಿಯವರಿಗೆ ಎಲ್ಲಿ ನಮ್ಮ ಅಸ್ತಿತ್ವವು ಸಂಪೂರ್ಣ ಕಳೆದು ಹೋಗುತ್ತಿದೆ ಎನ್ನುವ ಆತಂಕದಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆಗೆ ಏನಾದ್ರೂ ಅರ್ಥವಿದೆಯೇ ಪಾದಯಾತ್ರೆಗೊಂದು ಒಂದು ಕಾರಣ ಬೇಕು. ನಿರ್ದಿಷ್ಟವಾದ ಗುರಿ ಬೇಕು. ಎದರಗೋಸ್ಕರ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ
ಅವರೇ ಆಲೋಚನೆ ಮಾಡಿಕೊಳ್ಳಬೇಕು ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ವಾಗ್ದಾಳಿ ನಡೆಸಿದರು.

ಅವರು ಅಥಣಿ ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು
ಬಿಜೆಪಿಯವರ ಉದ್ದೇಶ ಏನು ನಾಗೇಂದ್ರ ರಾಜೀನಾಮೆ ಕೊಡಬೇಕಾಗಿತ್ತು. ಕೊಟ್ಟಾಯಿತು. ಆದರೂ ಪಾದಯಾತ್ರೆ ಮುಂದುವರಿಸಿದ್ದಾರೆ. ಬಿಜೆಪಿಯಲ್ಲಿ ರಾಜ್ಯಾದ್ಯಂತ ಆಂತರಿಕ ಕಲಹವಿದ್ದು,
ಬರುವ ನವೆಂಬರ್ ವೇಳೆಗೆ ಬಿಜೆಪಿಯ ರಾಜ್ಯ ಮಟ್ಟದ ನಾಯಕತ್ವದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ ಎಂಬ ಆಂತರಿಕ ಆತಂಕ ಪಕ್ಷದಲ್ಲಿದೆ. ಪಕ್ಷದ ಹೈಕಮಾಂಡ್‍ಗೆ ನಾವಿನ್ನೂ ಜೀವಂತವಾಗಿದ್ದೇವೆ, ಏನೋ ಮಾಡುತ್ತಿದ್ದೇವೆ ಎಂದು ಮನವರಿಕೆ ಮಾಡಿಕೊಡಲು ಹಾಗೂ ತಮ್ಮ ಕುರ್ಚಿಗಳನ್ನು ಉಳಿಸಿಕೊಳ್ಳಲು ನಾಯಕರು ಈ ನಾಟಕ ನಡೆಸುತ್ತಿದ್ದಾರೆ ಎಂದು ಅವರು ಟೀಕಿಸಿದರು.

“ಅಧಿವೇಶನದಲ್ಲಿ ಚರ್ಚೆ ಮಾಡಬೇಕಿತ್ತು..!” 195 ಕೋಟಿ ರೂ. ಹಣ ವಾಪಸ್ ಬರಬೇಕು ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಈ ವಿಚಾರವನ್ನು ವಿಧಾನ ಮಂಡಲದ ಅಧಿವೇಶನದಲ್ಲಿ ಸಮರ್ಪಕವಾಗಿ ಚರ್ಚೆ ಮಾಡಬೇಕಿತ್ತು.
ಇತ್ತೀಚೆಗಷ್ಟೆ ಏಳು ದಿನಗಳ ಅಧಿವೇಶನ ನಡೆಯಿತು. ವಿರೋಧ ಪಕ್ಷವಾಗಿ ಜನರ ಸಮಸ್ಯೆಗಳನ್ನು ಎತ್ತಿಹಿಡಿಯುವುದು, ಸರ್ಕಾರದ ತಪ್ಪುಗಳನ್ನು ಸಭೆಯಲ್ಲಿ ಚರ್ಚಿಸುವುದು ಅವರ ಜವಾಬ್ದಾರಿಯಾಗಿತ್ತು. ಆದರೆ ಅಧಿವೇಶನದಲ್ಲಿ ಕೇವಲ ಗದ್ದಲ-ಕೂಗಾಟ ಚಿರಾಟ ನಡೆಸಿ ಹೊರಬಂದು, ಈಗ ಬೀದಿಯಲ್ಲಿ ನಿಂತು ಮಾತನಾಡುವುದು ವಿರೋಧ ಪಕ್ಷದ ಲಕ್ಷಣವಲ್ಲ ಕೇವಲ ಕೂಗಾಟ, ಚೀರಾಟ ಮಾಡಲು ಜನರು ಅವರನ್ನು ಆಯ್ಕೆ ಮಾಡಿ ಕಳುಹಿಸಿಲ್ಲ. ರಾಜ್ಯದ ಅಭಿವೃದ್ದಿಗಾಗಿ ಆಯ್ಕ ಮಾಡಿ ಕಳುಹಿಸಿದ್ದಾರೆ. ಎಂದರು.

ರಾಜ್ಯದಲ್ಲಿ ಕಳೆದ 50 ವರ್ಷಗಳಲ್ಲೇ ಕಾಣದಂತಹ ಭೀಕರ ಬರಗಾಲ ಎದುರಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ವಿರೋಧ ಪಕ್ಷದವರು ಸರ್ಕಾರದ ಜೊತೆ ನಿಲ್ಲಬೇಕಿತ್ತು. ಪಕ್ಷಾತೀತವಾಗಿ ನಾವೆಲ್ಲರೂ ದೆಹಲಿಗೆ ಹೋಗಿ ಕೇಂದ್ರ ಸರ್ಕಾರದಿಂದ ಬರ ಪರಿಹಾರ ತರೋಣ ಎಂದು ಹೇಳುವ ಬದಲು ಅನಗತ್ಯ ರಾಜಕೀಯ ಮಾಡುತ್ತಿದ್ದಾರೆ. ಇಡೀ ರಾಜ್ಯದ ಪರಿಸ್ಥಿತಿಯನ್ನು ಅರಿಯಲು ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ನಡೆಸುವುದೇ ಸೂಕ್ತ. ಒಬ್ಬ ಮುಖ್ಯಮಂತ್ರಿ ಸೈಕಲ್ ಅಥವಾ ಕಾಲ್ನಡಿಗೆಯಲ್ಲಿ ಇಡೀ ರಾಜ್ಯ ಸುತ್ತಲು ಸಾಧ್ಯವೇ…? ಹಿಂದೆ ಅಧಿಕಾರದಲ್ಲಿದ್ದ ಯಾವ ಮುಖ್ಯಮಂತ್ರಿಗಳು ಹೊಲ-ಗದ್ದೆಗಳಿಗೆ ಸೈಕಲ್ ಏರಿ ಹೋಗಿದ್ದರೇ…? ಎಂದು ಪ್ರಶ್ನಿಸುವ ಮೂಲಕ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

“ನವೆಂಬರ್‍ನಲ್ಲಿ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ..?”
ನವೆಂಬರ್ ತಿಂಗಳಲ್ಲಿ ಬಿಜೆಪಿ ರಾಜ್ಯ ನಾಯಕತ್ವದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ. ನಾನು ಆ ಪಕ್ಷದಲ್ಲಿ ಇದ್ದು ಎಲ್ಲವನ್ನು ನೋಡಿದ್ದೇನೆ. ನನಗಿರುವ ಮಾಹಿತಿ ಅನೇಕ ನಾಯಕರನ್ನು ಬದಲಾವಣೆ ಮಾಡಲು ಸಿದ್ದತೆ ನಡೆದಿದೆ. ಪಾದಯಾತ್ರೆಯ ಹಿಂದೆ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಉದ್ದೇಶವಿದೆ ಎಂದು ಆರೋಪಿಸಿದರು.


“ವೈದ್ಯರ ಸಲಹೆಯಂತೆ ವಾಕಿಂಗ್ ಮಾಡಲು ಬಿಜೆಪಿ ಪಾದಯಾತ್ರೆ”
ಬಿಜೆಪಿಯ ಅನೇಕ ನಾಯಕರಿಗೆ ಬ್ಲಡ್ ಪ್ರೆಶರ್ ಮತ್ತು ಶುಗರ್ ಜಾಸ್ತಿಯಾಗಿದೆ ಎಂದು ಕಾಣುತ್ತದೆ. ವೈದ್ಯರು ಪ್ರತಿದಿನ 25 ರಿಂದ 30 ಕಿಲೋಮೀಟರ್ ವಾಕಿಂಗ್ ಹಾಗೂ ಓಡಾಟ ಮಾಡಿದರೆ. ಬಿಪಿ ಶುಗರ್ ನಿಯಂತ್ರಣದಲ್ಲಿರುತ್ತದೆ ಎಂದು ಸಲಹೆ ನೀಡಿರಬಹುದು. ಬಹುಶಃ ವೈದ್ಯರ ಆ ಸಲಹೆಯ ಮೇರೆಗೆ ಎಲ್ಲರೂ ಒಟ್ಟಾಗಿ ವಾಕಿಂಗ್ ಮಾಡುತ್ತಿರಬೇಕು, ಅಷ್ಟೇ ಅದನ್ನು ಬಿಟ್ಟರೆ ಇದರಲ್ಲಿ ಬೇರೆ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ

   ಲಕ್ಷ್ಮಣ ಸವದಿ. ಸಹಕಾರ ಸಚಿವರು