Home ಜಿಲ್ಲೆ ಎಸ್‍ಐಆರ್ ಕಾರ್ಯದಲ್ಲಿನ ಲೋಪ ಸರಿಪಡಿಸಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ; ಜಿಲ್ಲಾಧಿಕಾರಿಗೆ ಮನವಿ

ಎಸ್‍ಐಆರ್ ಕಾರ್ಯದಲ್ಲಿನ ಲೋಪ ಸರಿಪಡಿಸಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ; ಜಿಲ್ಲಾಧಿಕಾರಿಗೆ ಮನವಿ

ವಿಜಯಪುರ, ಜು. 7: ವಿಜಯಪುರ ಮಹಾನಗರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‍ಐಆರ್) ಕಾರ್ಯದಲ್ಲಿನ ಲೋಪಗಳನ್ನು ತಕ್ಷಣ ಸರಿಪಡಿಸಿ, ನಗರದ ಪ್ರಮುಖ ಸ್ಥಳಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಜೆಪಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್‍ಐಆರ್ ಮಹತ್ವದ ಸಾಂವಿಧಾನಿಕ ಪ್ರಕ್ರಿಯೆಯಾಗಿದ್ದು, ಅದರ ಆಶಯವನ್ನು ಬುಡಮೇಲು ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು. ವಿಜಯಪುರ ಮಹಾನಗರದಲ್ಲಿ ಎಸ್‍ಐಆರ್ ಕಾರ್ಯ ಅತ್ಯಂತ ಅವ್ಯವಸ್ಥೆಯಿಂದ ನಡೆಯುತ್ತಿದ್ದು, ಚುನಾವಣಾ ಆಯೋಗದ ನಿಯಮಾನುಸಾರ ಬಿಎಲ್‍ಒಗಳು ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸಬೇಕಾದರೂ, ಹಲವರು ದೇವಸ್ಥಾನ, ಮಸೀದಿ ಹಾಗೂ ಶಾಲೆಗಳಲ್ಲಿ ಕುಳಿತು ಫಾರ್ಮ್‍ಗಳನ್ನು ವಿತರಿಸುತ್ತಿದ್ದಾರೆ ಎಂದು ದೂರಿದರು.
ಮೇಯರ್ ಎಂ.ಎಸ್. ಕರಡಿ ಮಾತನಾಡಿ, ಎಸ್‍ಐಆರ್ ಪ್ರಕ್ರಿಯೆ ಸಮರ್ಪಕವಾಗಿ ನಡೆಯದಿದ್ದರೆ ಅರ್ಹ ಮತದಾರರಿಗೆ ತೊಂದರೆಯಾಗಲಿದೆ. ಮತದಾರರ ಮ್ಯಾಪಿಂಗ್ ಕಾರ್ಯವೂ ಅವೈಜ್ಞಾನಿಕವಾಗಿ ಹಾಗೂ ತಪ್ಪಾಗಿ ನಡೆದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ ಮಾತನಾಡಿ, ಬಿಎಲ್‍ಒಗಳಿಗೆ ಸಮರ್ಪಕ ತರಬೇತಿ ನೀಡದ ಕಾರಣ ಹಲವು ಲೋಪಗಳು ಉಂಟಾಗುತ್ತಿವೆ. ಈಗಾಗಲೇ ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿರುವ ಬಿಎಲ್‍ಒಗಳು ಎಸ್‍ಐಆರ್ ಕಾರ್ಯಕ್ಕಾಗಿ ಸಮಯದ ಅಭಾವವಿದೆ ಎಂದು ಹೇಳುತ್ತಿದ್ದು, ಎಲ್ಲ ಫಾರ್ಮ್‍ಗಳನ್ನು ಹೊತ್ತು ಮನೆ-ಮನೆಗೆ ತೆರಳಲು ಸಾಧ್ಯವಿಲ್ಲ ಎಂದು ಸಾರ್ವಜನಿಕರನ್ನೇ ತಮ್ಮ ಬಳಿಗೆ ಬರಲು ಸೂಚಿಸುತ್ತಿದ್ದಾರೆ ಎಂದರು. ಹೀಗಾಗಿ ಅವರಿಗೆ ಸಹಾಯಕ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಇಬ್ರಾಹಿಂಪುರ ವಾರ್ಡ್ 21ರ ಶಾಲೆ ಸಂಖ್ಯೆ-6, ಆಲಅಮೀನ್ ಪ್ರದೇಶ ಸೇರಿದಂತೆ 9, 11, 14, 31 ಹಾಗೂ 33ನೇ ವಾರ್ಡ್‍ಗಳಲ್ಲಿ ಎಸ್‍ಐಆರ್ ಕಾರ್ಯ ಸಮರ್ಪಕವಾಗಿ ನಡೆಯದ ಕಾರಣ ಮತದಾರರಿಗೆ ತೊಂದರೆಯಾಗುತ್ತಿದೆ ಎಂದು ಅವರು ತಿಳಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ಪಾರದರ್ಶಕ ಪ್ರಕ್ರಿಯೆಗಾಗಿ ವಿಜಯಪುರ ನಗರದ ಪ್ರಮುಖ ಸ್ಥಳಗಳಲ್ಲಿ ತಕ್ಷಣ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಬೇಕು. ಜೊತೆಗೆ ಬಿಎಲ್‍ಒಗಳು ಕಡ್ಡಾಯವಾಗಿ ಮನೆ-ಮನೆಗೆ ತೆರಳಿ ಕಾರ್ಯನಿರ್ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಧರಣಿಯಲ್ಲಿ ಉಪ ಮೇಯರ್ ಸುಮಿತ್ರಾ ಜಾಧವ, ಡಾ. ಸುರೇಶ ಬಿರಾದಾರ, ಗೋಪಾಲ ಘಟಕಾಂಬಳೆ, ಉಮೇಶ್ ಕಾರಜೋಳ, ಭೀಮಾಶಂಕರ ಹದನೂರ, ಸಂಜಯ ಪಾಟೀಲ ಕನಮಡಿ, ಮಳುಗೌಡ ಪಾಟೀಲ, ಶಿವರುದ್ರ ಬಾಗಲಕೋಟ, ರಾಹುಲ ಜಾಧವ, ರಾಜಶೇಖರ ಮಗಿಮಠ, ಸುನೀತಾ ಒಡೆಯರ, ಬಸವರಾಜ ಬೈಚಬಾಳ, ಹರ್ಷಗೌಡ ವಿಜಯ್ ಜೋಶಿ ಪಾಟೀಲ, ಕೃಷ್ಣ ಗುನ್ನಾಳಕರ, ಶ್ರೀಕಾಂತ ಶಿಂಧೆ, ರಾಜೇಶ ತಾವಸೆ, ವಿನಾಯಕ ದಹಿಂಡಿ, ರವೀಂದ್ರ ಲೋಣಿ, ಮಹೇಶ ಒಡೆಯರ, ಪಾಪುಸಿಂಗ್ ರಜಪೂತ, ಚಿನ್ನು ಚಿನಗುಂಡಿ, ವಿವೇಕ ತಾವರಗೇರಿ, ಸದಾಶಿವ ಭೂಟಾಳೆ, ಸಂಗಮೇಶ ಉಕ್ಕಲಿ, ವಿಜಯ ಹಿರೇಮಠ, ಆನಂದ ಮುಚ್ಚಂಡಿ, ಪ್ರಫುಲ್ ಪವಾರ, ಸಿದ್ದು ಮಲ್ಲಿಕಾರ್ಜುನಮಠ, ಭರತ ಕೋಳಿ, ಸತೀಶ ಗಾಯಕವಾಡ, ಉಮೇಶ್ ವಿರಕರ, ಗೇಸುದರಾಜ ಇನಾಮದಾರ, ಬಸವರಾಜ ಹಳ್ಳಿ, ಗಣೇಶ ರಣದೇವಿ, ಯೋಗೇಶ ಸುಲಾಖೆ, ರವಿ ಕನ್ನೊಳ್ಳಿ, ಗುರುರಾಜ ಜೋಶಿ, ಸಂತೋಷ ಪತ್ತಾರ, ಗಣೇಶ ಉಪ್ಪಾರ, ರವಿ ಬಿರಾದಾರ, ಬಸವರಾಜ ಮಣೂರ, ಶಿವಾನಂದ ರೂಡಗಿ, ವಿನಾಯಕ ಕುಂದನಗಾರ, ಅನಿಲ ಉಪ್ಪಾರ, ಪ್ರಶಾಂತ ಬಿಜಾಪುರ, ಭಾರತಿ ಭೂಯಾರ, ಜಯಶ್ರೀ ಅಫಜಲಪುರ, ಬಸಮ್ಮ ಗುಜರಿ, ರೇಖಾ ಚವ್ಹಾಣ, ಮೀನಾ ಕುಂದನಗಾರ, ಮಂಜುಳಾ ಮುತ್ತಗೀಕರ, ಜಯಶ್ರೀ ಬಿರಾದಾರ ಹಾಗೂ ಭಾರತಿ ಶಿವಣಗಿ ಸೇರಿದಂತೆ ಹಲವರು ಭಾಗವಹಿಸಿದ್ದರು.