Home ಜಿಲ್ಲೆ ಕಲಬುರಗಿ ಕಲ್ಯಾಣ ಚಾಲುಕ್ಯರ ಇತಿಹಾಸ ಸಾರುವ ಭೂಷಣಗಿ ಸ್ಮಾರಕಗಳು

ಕಲ್ಯಾಣ ಚಾಲುಕ್ಯರ ಇತಿಹಾಸ ಸಾರುವ ಭೂಷಣಗಿ ಸ್ಮಾರಕಗಳು

ಕಲಬುರಗಿ :ಮೇ.17: ಭೂಷಣಗಿ ಗ್ರಾಮದ ಸ್ಮಾರಕಗಳು ಕಲ್ಯಾಣ ಚಾಲುಕ್ಯರ ವಿವಿಧ ಕ್ಷೇತ್ರಗಳ ಕುರಿತು ಮಹತ್ವದ ಇತಿಹಾಸವನ್ನು ತಿಳಿಸುತ್ತವೆ ಎಂದು ಸಂಶೋಧಕ-ಸಾಹಿತಿ ಮತ್ತು ಕಲಬುರಗಿ ಜಿಲ್ಲಾ 22ನೇ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು.
ಜಿಲ್ಲೆಯ ಕಮಲಾಪುರ ತಾಲೂಕಿನ ಭೂಷಣಗಿ ಗ್ರಾಮದ ಐತಿಹಾಸಿಕ ಬಸವಣ್ಣ ದೇವಾಲಯದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ಆಯೋಜಿಸಿದ ಜಿಲ್ಲೆಯ ಐತಿಹಾಸಿಕ ಸ್ಥಳ ಪರಿಚಯಾತ್ಮಕ-50ರ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಅವರು ಮಾತನಾಡುತ್ತಿದ್ದರು.
ಕನ್ನಡ ನಾಡಿಗೆ ಕಲ್ಯಾಣ ಚಾಲುಕ್ಯ ಅರಸು ಮನೆತನ ನೀಡಿದ ಕೊಡುಗೆ ಅಪಾರವಾಗಿದೆ. ಕಲೆ, ಸಾಹಿತ್ಯ, ಸಂಗೀತ, ಧರ್ಮ ಆಧ್ಯಾತ್ಮ, ರಾಜಕೀಯ, ಆಢಳಿತ, ಆರ್ಥಿಕ ಮುಂತಾದ ಕ್ಷೇತ್ರಗಳಿಗೆ ಕಲ್ಯಾಣ ಚಾಲುಕ್ಯರ ಚಕ್ರವರ್ತಿ ಆರನೇ ವಿಕ್ರಾಮದಿತ್ಯ ನೀಡಿಗೆ ಕೊಡುಗೆ ಅಮೂಲ್ಯವಾಗಿದೆ. ಹೊಡಲ್, ಮಹಾಗಾಂವ, ನರೋಣಾ, ಕಮಲಾಪೂರ, ಚಿಂಚನಸೂರ, ಬೋಧನ ಮುಂತಾದ ಗ್ರಾಮಗಳಲ್ಲಿ ದೊರೆಯುವ ಶಾಸನ, ಸ್ಮಾರಕರಗಳು ನಾಡಿನ ಇತಿಹಾಸದ ಪುಟ ತೆರೆಯುತ್ತವೆ, ಕೆಂಬಾಳೆ ನೆಲವೆಂದು ಖ್ಯಾತಿ ಹೊಂದಿದ ಕಮಲಾಪೂರ ಮಣ್ಣಿನ ಗುಣಧರ್ಮವು ಬಹಳ ಪವಿತ್ರವಾಗಿದೆ, ಆರನೇ ವಿಕ್ರಮಾದಿತ್ಯ ರಾಜನಿಗೆ ಕಮಲಾಪೂರದಲ್ಲಿ ಕೆಂಬಾಳೆ (ಕೆಂಪು ಬಾಳೆ ಹಣ್ಣು)ಯಿಂದ ಸ್ವಾಗತ ಕಮಾನು ನಿರ್ಮಿಸಿ ಅದ್ದೂರಿಯಾಗಿ ಸ್ವಾಗತಿಸಿದ ಇತಿಹಾಸವು ಅನೇಕ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಭೂಷಣಗಿ ಗ್ರಾಮದ ಐತಿಹಾಸಿಕ ಬಸವಣ್ಣ ಮತ್ತು ಸಂಗಮೇಶ್ವರ ದೇವಾಲಯಗಳು ಕಲಾತ್ಮಕವಾಗಿವೆ. ಗರ್ಭಗುಡಿ, ಮುಖಮಂಟಪ, ವೀರಗಲ್ಲುಗಳು, ದ್ವಾರಪಟ್ಟಿಕೆ, ದ್ವಾರಪಾಲಕರ ಶಿಲ್ಪಗಳು ಗಮನಸೆಳೆಯುತ್ತಿವೆ. 11ನೇ ಶತಮಾನದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಈ ಸ್ಮಾರಕಗಳ ರಕ್ಷಣೆ ಅವಶ್ಯವಾಗಿದೆ. ಪ್ರತಿಯೊಬ್ಬರು ಐತಿಹಾಸಿಕ ಪ್ರಜ್ಞೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ್ ಮಾತನಾಡಿ, ಕಳೆದ ಎರಡುವರೆ ವರ್ಷಗಳಿಂದ ಬಳಗದ ವತಿಯಿಂದ ಜಿಲ್ಲೆಯ ಐತಿಹಾಸಿಕ ಸ್ಥಳಗಳು, ಸ್ಮಾರಕಗಳ ಬಗ್ಗೆ ಪರಿಚಯ ಮತ್ತು ಇತಿಹಾಸ ಜಾಗೃತಿ ಅಭಿಯಾನ ಯಶಸ್ವಿಯಾಗಿ ಸಾಗಿ ಬಂದಿದೆ, ಇದೊಂದು ಅಪರೂಪದ ಕಾರ್ಯಕ್ರಮವಾಗಿದ್ದು ಗ್ರಾಮಸ್ಥರು ತುಂಬು ಹೃದಯದಿಂದ ಸ್ವಾಗತಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪ ಬಿರಾದಾರ, ಅರ್ಚಕ ಚಂದ್ರಕಾಂತ ಕುಂಬಾರ, ಗ್ರಾಮಸ್ಥರಾದ ಶಾಂತವೀರಪ್ಪ, ಚನ್ನಬಸವ ಮಹಾಜನ, ವಿಜಯಕುಮಾರ ಕುಂಬಾರ, ಶಿವಕುಮಾರ ಮುಲಗೆ, ಬಸವರಾಜ ಮಾಲಿಪಾಟೀಲ, ಆಕಾಶ ಪೋಲಿಸ ಬಿರಾದಾರ, ಮಲ್ಲಿಕಾರ್ಜುನ ಮುಲಗೆ, ಚಂದ್ರಕಾಂತ ಎಸ್.ಕುಂಬಾರ, ಶರಣು ಮೂಲಗೆ ಸೇರಿದಂತೆ ಇನ್ನಿತರರಿದ್ದರು.
———————–
ಕಮಲಾಪೂರ ತಾಲೂಕಿನಲ್ಲಿ ಹಲವಾರು ಐತಿಹಾಸಿಕ ಸ್ಮಾರಕಗಳು ನಾಡಿನ ಇತಿಹಾಸದ ಪುಟ ತೆರೆಯುತ್ತವೆ. ಕಮಲಾಪುರ, ಭೂಷಣಗಿ, ಹೊಡಲ್, ಕಣ್ಣೂರು, ಹೊಳಕುಂದಾ, ಚಿಂಚನಸೂರ, ನರೋಣಾ, ಬೋಧನ, ಮಹಾಗಾಂವ, ಶ್ರೀಚಂದ, ಮಡಕಿ, ಮುಂತಾದ ಗ್ರಾಮಗಳು ಕಲ್ಯಾಣ ಚಾಲುಕ್ಯರ ಕಾಲದ ಕಲೆ, ಸಾಹಿತ್ಯ ಸಂಗೀತ, ಧರ್ಮ, ಆಧ್ಯಾತ್ಮ, ಆಡಳಿತ, ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಗಳ ಮೇಲೆ ಬೆಳಕು ಚೆಲ್ಲುವ ಸ್ಮಾರಕಗಳ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ಐತಿಹಾಸಿಕ ಪ್ರಜ್ಞೆ ಜಾಗೃತಗೊಳ್ಳಬೇಕಾಗಿದೆ.
ಮುಡುಬಿ ಗುಂಡೇರಾವ ಸಂಶೋಧಕ-ಸಾಹಿತಿಗಳು