Home ಜಿಲ್ಲೆ ತುಮಕೂರು ಭೂಮೇಶ್ವರ ಕಟ್ಟೆ ಕೆರೆ ಪುನಶ್ಚೇತನಕ್ಕೆ ಭೂಮಿ ಪೂಜೆ

ಭೂಮೇಶ್ವರ ಕಟ್ಟೆ ಕೆರೆ ಪುನಶ್ಚೇತನಕ್ಕೆ ಭೂಮಿ ಪೂಜೆ

ತಿಪಟೂರು, ಜೂ. ೧೩- ತಾಲ್ಲೂಕಿನ ಕೆರೆಗೋಡಿ ಗ್ರಾಮದ ಭೂಮೇಶ್ವರ ಕಟ್ಟೆ (ಚಿಕ್ಕ ಕಟ್ಟೆ)ಕೆರೆ ಪುನಶ್ಚೇತನದ ಭೂಮಿ ಪೂಜೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶ್ರೀ ಗುರುಪರದೇಶೀ ಕೇಂದ್ರ ಸ್ವಾಮೀಜಿಗಳ ಸಮಕ್ಷಮದಲ್ಲಿ ಹಮ್ಮಿಕೊಳ್ಳಲಾಗಿತ್ತು.


ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಡಾ.ಡಿ. ವೀರೇಂದ್ರ ಹೆಗ್ಗಡೆ ಯವರು ಶ್ರೀ ಮಂಜುನಾಥಸ್ವಾಮಿಯ ಆಶೀರ್ವಾದ ಬಲದಿಂದ ಗ್ರಾಮಾಭಿವೃದ್ಧಿ ಯೋಜನೆಯನ್ನು ಸ್ಥಾಪಿಸಿ ರಾಜ್ಯದ ಬಡ ಜನತೆಯ ಏಳ್ಗೆಗಾಗಿ ಸರ್ಕಾರದ ಪರ್ಯಾಯವೆಂಬಂತೆ ದೇವಸ್ಥಾನ ಮಠ ಮಂದಿರಗಳ ಜೀರ್ಣೋದ್ದಾರ, ಶಾಲೆಗಳಿಗೆ ಡೆಸ್ಕ್ ಬೆಂಚ್ ವಿತರಣೆ, ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ, ಜ್ಞಾನದೀಪ ಶಿಕ್ಷಕರ ನೇಮಕ, ಅಶಕ್ತರಿಗೆ ಮಾಶಾಸನ ವಿತರಣೆ, ವಾತ್ಸಲ್ಯ ಮನೆ ರಚನೆ, ರೈತರಿಗೆ ಕೃಷಿ ರೈತ ಕ್ಷೇತ್ರ ಪಾಠಶಾಲೆ, ಅಧ್ಯಯನ ಪ್ರವಾಸ, ಬಹುಮುಖ್ಯವಾಗಿ ಕೆರೆ ಪುನಶ್ಚೇತನ ಹೀಗೆ ಹತ್ತು ಹಲವಾರು ಸಮಾಜಮುಖಿ ಸೇವೆಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯದಲ್ಲಿ ೧೦೦೦ ಕ್ಕೂ ಮಿಕ್ಕಿದ ಕೆರೆಗಳನ್ನು, ತುಮಕೂರು ಜಿಲ್ಲೆಯಲ್ಲಿ ೧೦೭ ಕೆರೆಗಳನ್ನು ವಿಶೇಷವಾಗಿ ತಿಪಟೂರು ತಾಲ್ಲೂಕಿನಲ್ಲಿ ಇದುವರೆಗೂ ೧೫ ಕೆರೆ ಪುನಶ್ಚೇಯನಗೊಳಿಸಿದ್ದು ಕೆರೆಗೋಡಿ ಜನತೆಗೆ ೧೬ ನೇ ಕೆರೆ ಪುನಶ್ಚೇತನದ ರೂಪದಲ್ಲಿ ಇನ್ನಷ್ಟು ಸೌಲಭ್ಯ ಯೋಜನೆಯಿಂದ ದೊರೆಯುತ್ತಿದ್ದು ನಾವೆಲ್ಲರೂ ಕೆರೆ ಪುನಶ್ಚೇತನದ ಕಾರ್ಯ ಯೋಜನೆಗೆ ಸಹಕಾರಿಯಾಗಿ ನಿಂತು ಸ್ವಾಮಿ ಮಂಜುನಾಥನ ಹಾಗೂ ಪೂಜ್ಯರ ಕೃಪೆಗೆ ಪಾತ್ರರಾಗಬೇಕು ಎಂದು ಕರೆ ನೀಡಿದರು.


ತುಮಕೂರು-೧ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ಯೋಜನೆಯ ಕಾರ್ಯಕ್ರಮಗಳು ಕೆರೆ ಕಾಮಗಾರಿಯ ಸಂದರ್ಭ, ಗ್ರಾಮಸ್ಥರು ಯೋಜನೆಗೆ ಸಹಕರಿಸುವ ಬಗೆ ಮಾಹಿತಿ ನೀಡಿ, ಕೆರೆಗೋಡಿ ಚಿಕ್ಕಕಟ್ಟೆ ಪುನಶ್ಚೇತನಕ್ಕೆ ಪೂಜ್ಯ ಖಾವಂದರು ೪.೯೯ಲಕ್ಷ ರೂ ಪಾಯಿಗಳನ್ನು ಮಂಜೂರುಗೊಳಿಸಿದ್ದು ಗ್ರಾಮಸ್ಥರು ಸಂಪೂರ್ಣ ಮೊತ್ತದ ಪ್ರಯೋಜನ ಪಡೆದು ತಾಲ್ಲೂಕಿನ ಮಾದರಿ ಕಟ್ಟೆಯಾಗಿ ಮಾರ್ಪಾಡಿಸಲು ಯೋಜನೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.


ಈ ಸಂದರ್ಭದಲ್ಲಿ ರಂಗಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಕರ್ ಬೀಳೂರು, ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಉದಯ್ ಕೆ., ಕೆರೆ ಸಮಿತಿ ಅದ್ಯಕ್ಷ ಯೋಗಾನಂದಮೂರ್ತಿ, ಉಪಾದ್ಯಕ್ಷ ನಾಗರಾಜ್, ಕಾರ್ಯದರ್ಶಿ ಶಿವಲಿಂಗಪ್ಪ, ಗುಡಿಗೌಡರಾದ ಮಹಲಿಂಗಪ್ಪ, ಕೃಷಿ ಅಧಿಕಾರಿ ಪ್ರಮೋದ್ ಕುಮಾರ್, ಮೇಲ್ವಿಚಾರಕ ವಿನೋದ್, ಸೊಸೈಟಿ ಅಧ್ಯಕ್ಷ ಕೆ.ಎಸ್. ದೇವರಾಜ್, ಸೇವಾ ಪ್ರತಿನಿಧಿಗಳಾದ ರೂಪ, ಮಹಾಲಕ್ಷ್ಮಿ ಕೆರೆಗೋಡಿ ಗ್ರಾಮದ ಮುಖಂಡರಾದ ನಾಗರಾಜ್, ಶಂಕರಪ್ಪ, ನಿಂಗಪ್ಪ, ಪರಮೇಶ್ ಪೂಜಾರ್, ಕುಪ್ಪೂರು ಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.