Home ಮುಖಪುಟ ಸುದ್ದಿ ಬಾಗಲಕೋಟೆ ಕಾಂಗ್ರೆಸ್ ಗೆಲುವು: ದಾವಣಗೆರೆಯಲ್ಲಿ ಮುನ್ನಡೆ

ಬಾಗಲಕೋಟೆ ಕಾಂಗ್ರೆಸ್ ಗೆಲುವು: ದಾವಣಗೆರೆಯಲ್ಲಿ ಮುನ್ನಡೆ


ಉಪಸಮರ

ಬೆಂಗಳೂರು, ಮೇ ೪- ತೀವ್ರ ಕುತೂಹಲ ಕೆರಳಿಸಿರುವ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಮಲ್ಲಿಕಾರ್ಜುನ ಮುನ್ನಡೆಯಲ್ಲಿದ್ದಾರೆ.


ಜಿದ್ದಾಜಿದ್ದಿಯ ಹೋರಾಟದ ಕಣವಾಗಿದ್ದ ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಲ್ಲಿ ಉಮೇಶ್ ಮೇಟಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರತಿ ಮಠ ವಿರುದ್ಧ ಗೆದ್ದು ಬೀಗಿದ್ದಾರೆ. ಈ ಮೂಲಕ ತಮ್ಮ ತಂದೆ ದಿ. ಹೆಚ್.ವೈ. ಮೇಟಿಯವರ ಉತ್ತರಾಧಿಕಾರಿ ಹೊರಹೊಮ್ಮಿದ್ದಾರೆ. ಈ ಉಪಚುನಾವಣೆಯಲ್ಲಿ ಉಮೇಶ್ ಮೇಟಿ ೨೧,೮೬೬ ಮತಗಳ ಅಂತರದಿಂದ ಜಯಗಳಿಸಿದ್ದಾರೆ.


ಸಿದ್ದರಾಮಯ್ಯ ಪ್ರಭಾವ
ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ೯೭,೯೪೧ ಮತಗಳು ಬಿದ್ದರೆ ಬಿಜೆಪಿಯ ವೀರಣ್ಣ ಚರತಿ ಮಠ ಅವರಿಗೆ ೭೬,೦೭೫ ಮತಗಳು ಬಿದ್ದಿವೆ.


ದಿ. ಹೆಚ್.ವೈ. ಮೇಟಿಯವರು ನಿಧನದಿಂದ ಈ ಕ್ಷೇತ್ರದಲ್ಲಿ ಚುನಾವಣೆ ನಡೆದಿತ್ತು. ಹೆಚ್.ವೈ. ಮೇಟಿಯವರ ಅನುಕಂಪ ಚುನಾವಣೆಯಲ್ಲಿ ಕೆಲಸ ಮಾಡಿದ್ದು, ಅವರ ಪುತ್ರ ಉಮೇಶ್ ಮೇಟಿ ಅವರ ಗೆಲುವಿಗೆ ನೆರವಾಗಿದೆ. ಈ ಕ್ಷೇತ್ರದ ಫಲಿತಾಂಶ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಪ್ರತಿಷ್ಠೆಯಾಗಿತ್ತು. ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದರು. ಅವರ ಪ್ರಭಾವವು ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದೆ.


ದಾವಣಗೆರೆಯಲ್ಲಿ ಕೈ ಮುನ್ನಡೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿ. ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ ಮಲ್ಲಿಕಾರ್ಜುನ್ ಮುನ್ನಡೆ ಸಾಧಿಸಿದ್ದಾರೆ. ಆರಂಭಿಕವಾಗಿ ಇಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರು ೮ನೇ ಸುತ್ತಿನವರೆಗೂ ಮುನ್ನಡೆಯಲ್ಲಿದ್ದರು. ನಂತರದ ಸುತ್ತುಗಳಲ್ಲಿ ಸಮರ್ಥ ಮಲ್ಲಿಕಾರ್ಜುನ ಮುನ್ನಡೆ ಸಾಧಿಸಿ ೧೬ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಾಗ ಸಮರ್ಥ ಮಲ್ಲಿಕಾರ್ಜುನ್ ೭, ೪೨೩ ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಈ ಕ್ಷೇತ್ರದ ಮತ ಎಣಿಕೆ ಪ್ರಗತಿಯಲ್ಲಿದ್ದು, ಇನ್ನು ೪ನೇ ಸುತ್ತಿನ ಮತ ಎಣಿಕೆ ಬಾಕಿಯಿದೆ. ಪತ್ರಿಕೆ ಅಚ್ಚಿಗೆ ಹೋಗುವ ವೇಳೆಗೆ ಸಮರ್ಥ ಮಲ್ಲಿಕಾರ್ಜುನ್ ಅವರೇ ಮುನ್ನಡೆ ಕಾಯ್ದುಕೊಂಡಿದ್ದಾರೆ.