Home ಮುಖಪುಟ ಸುದ್ದಿ ೨೦ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ೬ ಮಂದಿ ಸೆರೆ

೨೦ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ೬ ಮಂದಿ ಸೆರೆ

ಬೆಂಗಳೂರು, ಮೇ.೫-ಯಶವಂತಪುರ ಹಾಗೂ ನಂದಿನಿಲೇಔಟ್ ನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಹೊರರಾಜ್ಯದ ಇಬ್ಬರು, ಸ್ಥಳೀಯ ನಾಲ್ವರು ಸೇರಿ ೬ ಮಂದಿ ಡ್ರಗ್ ಫೆಡ್ಲರ್ ಗಳನ್ನು ಬಂಧಿಸಿ ೨೦.೧೦ ಕೋಟಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳಿಂದ ೨೦.೧೦ ಕೋಟಿ ಮೌಲ್ಯದ ೮ ಕೆಜಿ ೫೮ ಗ್ರಾಂ ಎಂಡಿಎಂಎ, ೫ ಕೆಜಿ ೭೦೦ ಗ್ರಾಂ ಹೈಡೋ ಗಾಂಜಾ, ೧ಕಾರು ಕೃತ್ಯಕ್ಕೆ ಬಳಸಿದ್ದ ೪ ಮೊಬೈಲ್ ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ನಂದಿನಿ ಲೇಔಟ್ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕೇರಳ ಮೂಲದ ಸೌಗೇಶ್ ಮತ್ತು ಅಲ್ತಾಫ್ ನನ್ನು ಬಂಧಿಸಿ ೫.೭೫ ಕೋಟಿ ರೂ.ಮೌಲ್ಯದ ೫ ಕೆಜಿ ೭೦೦ ಗ್ರಾಂ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.


ಆರೋಪಿಗಳು ವಿದೇಶದಿಂದ ಹೈಡ್ರೋ ಗಾಂಜಾವನ್ನು ತರಿಸಿ ಸ್ಥಳೀಯರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ಹೇಳಲಾಗಿದೆ. ಕೇರಳದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಇವರ ಮೇಲೆ ಈ ಹಿಂದೆಯೇ ಅಲ್ಲಿನ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ ನಂದಿನಿ ಲೇಔಟ್ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.


ಯಶವಂತಪುರ ಪೊಲೀಸರು ಅಂತರರಾಷ್ಟ್ರೀಯ ಡ್ರಗ್ ಜಾಲವನ್ನು ಬೇಧಿಸಿ ಆರೋಪಿಗಳಾದ ಸೈಯದ್ ಸುಹೇಲ್, ಮೊಹಮ್ಮದ್ ಸಮೀರ್, ಸಾದಿಕ್ ಪಾಷಾ ಮತ್ತು ಮೊಹಮ್ಮದ್ ಹಕ್‌ರನ್ನು ಬಂಧಿಸಿ ನಾಲ್ವರಿಂದ ೯ ಕೋಟಿ ರೂಪಾಯಿ ಮೌಲ್ಯದ ೮ ಕೆಜಿ ಎಂಡಿಎಂಎ ಜಪ್ತಿ ಮಾಡಲಾಗಿದೆ.


ಆರೋಪಿಗಳು ನೈಜೀರಿಯಾ ಪ್ರಜೆಗಳಿಂದ ಡ್ರಗ್ಸ್ ಖರೀದಿಸಿ ನಗರದಲ್ಲಿ ಸ್ಥಳೀಯರಿಗೆ ಪೂರೈಸುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಬಂಧಿತರಿಂದ ಒಂದು ಕಾರು ಹಾಗೂ ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಲ್ಲಿ ಸೈಯದ್ ಸುಹೇಲ್ ಹೊಸಕೋಟೆ ಠಾಣೆಯ ರೌಡಿಶೀಟರ್ ಆಗಿದ್ದು, ಈ ಹಿಂದೆ ಪ್ರಕರಣವೊಂದರಲ್ಲಿ ಪೊಲೀಸರು ಈತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಸದ್ಯ ಈ ಜಾಲಕ್ಕೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ನೈಜೀರಿಯಾ ಪ್ರಜೆಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


ಆರೋಪಿಗಳು ವಿಚಾರಣೆಯಲ್ಲಿ ಹೆಚ್ಚಿನ ಹಣಗಳಿಸಲು, ಹೊರ ರಾಜ್ಯದ ಮತ್ತು ಸ್ಥಳೀಯ ಅಪರಿಚಿತ ವ್ಯಕ್ತಿಗಳಿಂದ ಎಂಡಿಎಂಎ ಮತ್ತು ಹೈಡೋಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವುದನ್ನು ತಪ್ರೊಪ್ಪಿಕೊಂಡಿದ್ದಾರೆ.


ಈ ಪ್ರಕರಣಗಳಲ್ಲಿ ಆರೋಪಿಗಳಿಗೆ ನಿಷೇಧಿತ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಹೊರ ರಾಜ್ಯದ ಮತ್ತು ಸ್ಥಳೀಯ ಅಪರಿಚಿತ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಪ್ರಕರಣಗಳ ತನಿಖೆಯು ಪ್ರಗತಿಯಲ್ಲಿದೆ ಎಂದು ಹೇಳಿದರು.


ಈ ಕಾರ್ಯಾಚರಣೆಗಳನ್ನು ಉತ್ತರ ವಿಭಾಗದ ಡಿಸಿಪಿ ಬಿ.ಎಸ್.ನೇಮಗೌಡ, ಮಾರ್ಗದರ್ಶನದಲ್ಲಿ, ಯಶವಂತಪುರ ಎಸಿಪಿ ಮೇರಿ ಶೈಲಜಾ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಮಂಜುನಾಥ.ಎಸ್, ಗಣಪತಿ.ಆರ್.ಎಲ್ ಮತ್ತವರ ಸಿಬ್ಬಂದಿ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.