Home ಮುಖಪುಟ ಸುದ್ದಿ ಮಹಿಳಾ ಮೀಸಲಾತಿ ವಿರೋಧಿಸಿದ್ದ ಪಕ್ಷಗಳಿಗೆ ಸೋಲು

ಮಹಿಳಾ ಮೀಸಲಾತಿ ವಿರೋಧಿಸಿದ್ದ ಪಕ್ಷಗಳಿಗೆ ಸೋಲು

ಬೆಂಗಳೂರು, ಮೇ ೫- ಮಹಿಳಾ ಮೀಸಲಾತಿ ಕಾಯ್ದೆಯನ್ನು ವಿರೋಧಿಸಿದ್ದ ವಿಪಕ್ಷಗಳು ಪಂಚರಾಜ್ಯಗಳ ಚುನಾವಣೆಯಲ್ಲಿ ಸೋತಿವೆ. ಹೆಣ್ಣು ಮಕ್ಕಳ ಜ್ವಾಲಾಗ್ನಿಗೆ ಭಸ್ಮವಾಗಿವೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.


ಬೆಂಗಳೂರಿನಲ್ಲಿಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ರಾಜಕೀಯ ಶಕ್ತಿ ತುಂಬಲು ಪ್ರಧಾನಿ ಮೋದಿಯವರು ಸಂಸತ್‌ನಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಕಾಯ್ದೆಯನ್ನು ಮಂಡಿಸಿದ್ದರು. ಆದರೆ ಕಾಯ್ದೆಯನ್ನು ಕಾಂಗ್ರೆಸ್ ಜತೆ ಸೇರಿ ಟಿಎಂಸಿ, ಡಿಎಂಕೆ ಮತ್ತು ಎಡಪಕ್ಷಗಳು ಸೋಲಿಸಿದವು. ಮಹಿಳಾ ಮೀಸಲಾತಿ ಕಾಯ್ದೆಯನ್ನು ಸೋಲಿಸಿದ ಈ ಪಕ್ಷಗಳಿಗೆ ಪಂಚರಾಜ್ಯಗಳ ಜನ ತಕ್ಕಪಾಠ ಕಲಿಸಿದ್ದಾರೆ. ಮಹಿಳೆಯರಿಗೆ ಜ್ವಾಲಾಗ್ನಿಗೆ ಈ ಪಕ್ಷಗಳು ಬಲಿಯಾಗಿವೆ ಎಂದು ಬಣ್ಣಿಸಿದರು.
ಮಹಿಳಾ ಮೀಸಲಾತಿಯನ್ನು ವಿರೋಧಿಸಿದ ಪಕ್ಷಗಳು ಅದರ ಪ್ರತಿಫಲವನ್ನು ಅನುಭವಿಸಿವೆ ಎಂದು ಅವರು ಹೇಳಿದರು.


ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಜಯಭೇರಿ ಭಾರಿಸಿದೆ. ಮೂರು ರಾಜ್ಯಗಳಲ್ಲಿ ಪಕ್ಷದ ಗೆಲುವಿಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರವರಿಗೆ ಕರ್ನಾಟಕದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಗೂಂಡಾಗಿರಿ, ಹಿಂಸಾಚಾರ, ದುರಾಡಳಿತಕ್ಕೆ ಬಂಗಾಳದ ಜನರು ಕೊನೆ ಹಾಡಿದ್ದಾರೆ. ಪ್ರಧಾನಿ ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಸಿದ್ದಾಂತಕ್ಕೆ ಬೆಂಬಲ ನೀಡಿ ಐತಿಹಾಸಿಕ ತೀರ್ಪು ನೀಡಿದ್ದಾರೆ ಎಂದರು.


ಸ್ವಾಮಿ ವಿವೇಕಾನಂದ, ಬಂಕಿಮ್ ಚಂದ್ರ ಚಟರ್ಜಿರವರಂತಹ ಮಹನೀಯರ ಪುಣ್ಯ ಭೂಮಿಯನ್ನು ಮಮತಾ ಬ್ಯಾನರ್ಜಿ ನರಕ ಮಾಡಿದರು. ಅಲ್ಲಿನ ಜನ ಬದಲಾವಣೆ ಬಯಸಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಬಿಜೆಪಿ ನೇತೃತ್ವದಲ್ಲಿ ಪಶ್ಚಿಮ ಬಂಗಾಳ ಹೊಸ ಅಭಿವೃದ್ಧಿಯತ್ತ ಸಾಗಲಿದೆ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರದ ಸಾಧನೆಗಳು ಬಿಜೆಪಿಯ ಗೆಲುವಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.


ಪಾಪದ ಹಣದಲ್ಲಿ ಉಪಚುನಾವಣೆ ಗೆಲುವು
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರಬಹುದು. ಹಣ ಬಲದ ಮೇಲೆ ಚುನಾವಣೆ ಗೆದ್ದಿದೆ. ಪಾಪದ ಹಣದಲ್ಲಿ ಕಾಂಗ್ರೆಸ್ ಚುನಾವಣೆ ಗೆದ್ದಿದ್ದರೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ನಾಮಾವಶೇಷ ಆಗಲಿದೆ ಎಂದರು.


ಮುಖ್ಯಮಂತ್ರಿ ಸಿದ್ದರಾಮಯ್ಯ ಇವಿಎಂ ಬಗ್ಗೆ ತಕರಾರರು ತೆಗೆದಿದ್ದರು. ಕೇರಳದಲ್ಲಿ ಇವಿಎಂ ಮೂಲಕವೇ ಕಾಂಗ್ರೆಸ್ ಜಯಗಳಿಸಿದೆ. ರಾಜ್ಯದಲ್ಲೂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಈಗ ಇವಿಎಂ ಸರಿ ಇದೆಯೇ ಎಂದು ವ್ಯಂಗ್ಯವಾಡಿದ ಅವರು, ಎಲ್ಲಿ ಕಾಂಗ್ರೆಸ್ ಸೋಲುತ್ತದೋ ಅಲ್ಲಿ ಇವಿಎಂ ಸರಿಯಿಲ್ಲ. ಕಾಂಗ್ರೆಸ್ ಪಕ್ಷ ಗೆದ್ದರೆ ಇವಿಎಂ ಸರಿ ಇರುತ್ತದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.