
ಅಫಜಲಪುರ:ಮೇ.19: ಅಫಜಲಪುರ ತಾಲೂಕಿನ ಸುಕ್ಷೇತ್ರ ಆನೂರ ಗ್ರಾಮದೇವತೆ ಚಂದ್ರಗಿರಿ ಹಾಗೂ ಕಾಳಿಕಾದೇವಿ ಜಾತ್ರಾ ಮಹೋತ್ಸವ ಮೇ. 22 ರಂದು ಜರುಗಲಿದೆ ಎಂದು ದೇವಸ್ಥಾನ ಕಮೀಟಿಯವರು ತಿಳಿಸಿದ್ದಾರೆ.
ಪ್ರತಿವರ್ಷದ ಪದ್ದತಿಯಂತೆ ಗ್ರಾಮ ದೇವತೆಗಳ ಜಾತ್ರೆಯನ್ನು ಸಕಲ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ನಡೆಸಲು ಕಮೀಟಿಯವರು ಹಾಗೂ ಗ್ರಾಮಸ್ಥರು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದು ಮೇ.21 ರಂದು ಸಂಜೆ 7 ಗಂಟೆಗೆ ಚಂದ್ರಗಿರಿ ದೇವಿ ದೇವಸ್ಥಾನದ ಪ್ರಾಂಗಣದಲ್ಲಿರುವ ಅಗ್ನಿಕುಂಡದ ಬಾಗಿಲು ತೆರೆಯುವ ವಿಧಿ ಜರುಗಲಿದೆ. ಮೇ.22ರಂದು ನಸುಕಿನ ಜಾವ ವಿಶೇಷ ಪೂಜೆ ಜರುಗಲಿದೆ. ಬೆಳಿಗ್ಗೆ 6 ಗಂಟೆಗೆ ಅಗ್ನಿಕುಂಡಕ್ಕೆ ದೇವಿ ಅರ್ಚಕ ರಾಹುಲ್ ಭಂಡಾರಿ ಕುಟುಂಬದ ಮುತ್ತೈದೆಯರಿಂದ ಸುರಗಿ ಪೂಜೆ ನಂತರ ಅಗ್ನಿಸ್ಪರ್ಷ ಜರುಗಲಿದೆ. ಬಳಿಕ ಚಂದ್ರಗಿರಿ ದೇವಿ ಉತ್ಸವ ಮೂರ್ತಿ ಜಟ್ಟಿಂಗರಾಯನ ಪಲ್ಲಕ್ಕಿಯೊಂದಿಗೆ ಪುರ ಪ್ರವೇಶ ಜರುಗುವುದು, ಚನ್ನಮಲ್ಲೇಶ್ವರ ಮಠಕ್ಕೆ ತೆರಳಿ, ಭಕ್ತರಿಗೆ ದರ್ಶನ ನೀಡಿ ಅಲ್ಲಿಂದ ಕಾಳಿಕಾ ದೇವಿಯ ಪಲ್ಲಕ್ಕಿ ಸಮೇತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡಲಿದ್ದಾಳೆ.
ಈ ವೇಳೆ ಭಕ್ತರ ಮನೆ ಮನೆಗೆ ತೆರಳಿ ದರ್ಶನಾಶಿರ್ವಾದ ಕರುಣಿಸಲಿದ್ದಾಳೆ. ಸಂಜೆ 6 ಗಂಟೆಗೆ ದೇವಸ್ಥಾನದ ಪ್ರಾಂಗಣದಲ್ಲಿರುವ ಅಗ್ನಿಕುಂಡದಲ್ಲಿ ಪ್ರಧಾನ ಅರ್ಚಕ ರಾಹುಲ್ ಭಂಡಾರಿ ಅವರ ಮೀಸಲು ಅಗ್ನಿ ಪ್ರವೇಶ ಬಳಿಕ ದೇವಿ ಪಲ್ಲಕ್ಕಿಯೊಂದಿಗೆ ಭಕ್ತರು ಕೂಡ ಅಗ್ನಿ ಹಾಯುವ ಕಾರ್ಯಕ್ರಮ ಜರುಗಲಿದೆ. ರಾತ್ರಿ 9 ಗಂಟೆಗೆ ಗ್ರಾಮದ ಹವ್ಯಾಸಿ ನವ ತರುಣ ಕಲಾವಿಧರ ಸಂಘದವರು ಪ್ರದರ್ಶನ ಮಾಡುವ ಹುತ್ತಿನಲ್ಲಿ ಕೈಯಿಟ್ಟ ಮುತ್ತೈದೆ, ಅರ್ಥಾತ್ ಮಾಂಗಲ್ಯ ಉಳಿಸಿದ ಮೈದುನ ಎನ್ನುವ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಮೇ.23 ರಂದು ಸಂಜೆ 7 ಗಂಟೆಗೆ ಅಗ್ನಿಕುಂಡದ ಬಾಗಿಲು ಮುಚ್ಚುವ ಶಾಸ್ತ್ರ ಜರುಗುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ. ಮೇ.24 ರಂದು ರಾತ್ರಿ 9 ಗಂಟೆಗೆ ಸಾಮಾಜಿಕ ನಾಟಕದ 2 ನೇ ಪ್ರವೇಶ ಜರುಗಲಿದೆ. ಜಾತ್ರೆಗೆ ತೆಲ್ಲೂರ, ಬಿಲ್ವಾಡ, ಮಾತೋಳಿ, ಮಲ್ಲಾಬಾದ, ದೇಸಾಯಿ ಕಲ್ಲೂರ, ಅಫಜಲಪುರ, ಹಿಂಚಗೇರಾ, ಗುಡ್ಡೆವಾಡಿ, ಕೊಳೂರ, ಅತನೂರ, ಬಡದಾಳ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಭಕ್ತಾದಿಗಳು ಜಾತ್ರೆಯನ್ನು ಕಣ್ತುಂಬಿಕೊಳ್ಳಲಿದ್ದು ಭಕ್ತರಿಗಾಗಿ ಕಮೀಟಿ ವತಿಯಿಂದ ನೀರು, ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಕಮೀಟಿಯವರು ತಿಳಿಸಿದ್ದಾರೆ.
























