Home ಜಿಲ್ಲೆ ತುಮಕೂರು ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ’ಅಜ್ಜಿಯ ಕೈತುತ್ತು’ ಜ್ಞಾನ ವಿಕಾಸ ಕೇಂದ್ರದ ವಿಶಿಷ್ಟ ಕಾರ್ಯಕ್ರಮ

ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ’ಅಜ್ಜಿಯ ಕೈತುತ್ತು’ ಜ್ಞಾನ ವಿಕಾಸ ಕೇಂದ್ರದ ವಿಶಿಷ್ಟ ಕಾರ್ಯಕ್ರಮ

ಹುಳಿಯಾರು, ಜೂ. ೧೩- ಇಂದಿನ ಆಧುನಿಕ ಯುಗದಲ್ಲಿ ಕಣ್ಮರೆಯಾಗುತ್ತಿರುವ ಜಂಟಿ ಕುಟುಂಬಗಳ ಮೌಲ್ಯಗಳನ್ನು ಮರು ಸ್ಥಾಪಿಸುವ ಹಾಗೂ ಮುಗ್ಧ ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ನಿಟ್ಟಿನಲ್ಲಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪೋಚಕಟ್ಟೆ ಕಾರ್ಯಕ್ಷೇತ್ರದ ’ಸಂಪಿಗೆ ಜ್ಞಾನ ವಿಕಾಸ ಕೇಂದ್ರದಲ್ಲಿ ‘ಅಜ್ಜಿಯ ಕೈತುತ್ತು’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಹಿಂದಿನ ಕಾಲದಲ್ಲಿ ಕೂಡು ಕುಟುಂಬಗಳು (ಜಂಟಿ ಕುಟುಂಬ) ಸಮಾಜದ ಆಸ್ತಿಯಾಗಿದ್ದವು. ಮನೆಯಲ್ಲಿ ಹಿರಿಯರ ಮಾರ್ಗದರ್ಶನದಂತೆ ಪ್ರತಿಯೊಬ್ಬರೂ ಒಗ್ಗಟ್ಟಿನ ಜೀವನ ನಡೆಸುತ್ತಿದ್ದರು. ಅಜ್ಜ-ಅಜ್ಜಿಯಂದಿರು ಮಕ್ಕಳಿಗೆ ನೀತಿ ಕಥೆಗಳು, ಪೌರಾಣಿಕ ಪ್ರಸಂಗಗಳು ಹಾಗೂ ಹಬ್ಬ ಹರಿದಿನಗಳ ಸಾಂಸ್ಕೃತಿಕ ಮಹತ್ವವನ್ನು ಆಟದ ರಾಗದಲ್ಲೇ ತಿಳಿ ಹೇಳುತ್ತಿದ್ದರು. ಆದರೆ, ಪ್ರಸ್ತುತ ದಿನಗಳಲ್ಲಿ ಕೈಗಾರಿಕೀಕರಣ ಮತ್ತು ನಗರೀಕರಣದ ಪ್ರಭಾವದಿಂದಾಗಿ ಕೂಡು ಕುಟುಂಬಗಳು ಮರೆಯಾಗಿ, ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನೇರ ಪರಿಣಾಮವಾಗಿ ಇಂದಿನ ಮಕ್ಕಳು ಹಿರಿಯರ ಪ್ರೀತಿ, ವಾತ್ಸಲ್ಯ ಹಾಗೂ ಅವರ ಅನುಭವದ ನುಡಿಗಳಿಂದ ವಂಚಿತರಾಗುತ್ತಿದ್ದಾರೆ.


ಈ ಗಂಭೀರ ಸಾಮಾಜಿಕ ಸ್ಥಿತಿಯನ್ನು ಮನಗಂಡು, ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪತ್ನಿ ಹೇಮಾವತಿ ವಿ.ಹೆಗ್ಗಡೆ ಯವರ ಮಾರ್ಗದರ್ಶನದಲ್ಲಿ ’ಜ್ಞಾನ ವಿಕಾಸ’ ಕಾರ್ಯಕ್ರಮದ ಮೂಲಕ ‘ಅಜ್ಜಿಯ ಕೈತುತ್ತು’ ಎಂಬ ವಿಶಿಷ್ಟ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳಲ್ಲಿ ಹಿರಿಯರ ಬಗ್ಗೆ ಗೌರವ ಮೂಡಿಸಲು ಹಾಗೂ ಕಳೆದುಹೋಗುತ್ತಿರುವ ಕೌಟುಂಬಿಕ ಮೌಲ್ಯಗಳನ್ನು ನೆನಪಿಸಲು ಊರಿನ ಹಿರಿಯ ಅಜ್ಜಿಯನ್ನು ಕೇಂದ್ರಕ್ಕೆ ಆಹ್ವಾನಿಸಿ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲಾಯಿತು.


ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಪೂರ್ಣಮ್ಮ ನವರು ಮಕ್ಕಳಿಗೆ ಮತ್ತು ಪೋಷಕರಿಗೆ ಮಾರ್ಗದರ್ಶನ ನೀಡಿದರು. “ಅಜ್ಜಿಯ ಕೈತುತ್ತಿನಲ್ಲಿ ಕೇವಲ ಅನ್ನವಿರುವುದಿಲ್ಲ, ಅದರಲ್ಲಿ ಮಮತೆ, ಪ್ರೀತಿ ಮತ್ತು ಕೌಟುಂಬಿಕ ಸಂಸ್ಕಾರ ಅಡಗಿರುತ್ತದೆ. ಇಂದಿನ ಪೋಷಕರು ಮೊಬೈಲ್ ಸಂಸ್ಕೃತಿಯಿಂದ ಮಕ್ಕಳನ್ನು ದೂರವಿಟ್ಟು, ಅಮ್ಮನ ಕೈತುತ್ತಿನ ಶಕ್ತಿ ಹಾಗೂ ಅಜ್ಜಿಯ ಪ್ರೀತಿಯ ಗಮ್ಮತ್ತನ್ನು ಪರಿಚಯಿಸಬೇಕು ಎಂದು ಅವರು ಪ್ರೀತಿಯಿಂದ ತಿಳಿ ಹೇಳಿದರು.


ಚಿಕ್ಕ ಮಕ್ಕಳನ್ನು ಪ್ರೀತಿಯಿಂದ ಮಡಿಲಲ್ಲಿ ಕೂರಿಸಿಕೊಂಡ ಅಜ್ಜಿಯಂದಿರು, ತರಹೇವಾರಿ ನೀತಿ ಕಥೆಗಳನ್ನು ಹೇಳುತ್ತಾ, ತಾವೇ ಪ್ರೀತಿಯಿಂದ ಸಿದ್ಧಪಡಿಸಿದ್ದ ಅನ್ನದ ತುತ್ತನ್ನು ಮಕ್ಕಳಿಗೆ ನೀಡಿದ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ತುಂಬಿ ಬರುವಂತೆ ಮಾಡಿತು. ಹಿರಿಯರ ಒಡನಾಟ ಇಂದಿನ ತಲೆಮಾರಿನ ಮಕ್ಕಳಿಗೆ ಎಷ್ಟು ಅಗತ್ಯ ಎಂಬುದನ್ನು ಈ ಕಾರ್ಯಕ್ರಮ ಮನವರಿಕೆ ಮಾಡಿಕೊಟ್ಟಿತು.


ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಸುನಿತಾ, ಕೇಂದ್ರದ ಅಧ್ಯಕ್ಷೆ ರತ್ನಮ್ಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಸವಿತಾ ಹಾಗೂ ಕೇಂದ್ರದ ಪದಾಧಿಕಾರಿಗಳು, ಪೋಷಕರು ಮತ್ತು ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದು ಕಾರ್ಯಕ್ರಮದ ಔಚಿತ್ಯವನ್ನು ಶ್ಲಾಘಿಸಿದರು.