Home ಜಿಲ್ಲೆ ಜೈನಾಪೂರದಲ್ಲಿ ದಶಕಗಳ ಸಮಸ್ಯೆಗೆ ತೆರೆ – ಮಂದಿರ ದಾರಿಗೆ ಭೂದಾನ, ಗ್ರಾಮಸ್ಥರಿಂದ ಭವ್ಯ ಸನ್ಮಾನ

ಜೈನಾಪೂರದಲ್ಲಿ ದಶಕಗಳ ಸಮಸ್ಯೆಗೆ ತೆರೆ – ಮಂದಿರ ದಾರಿಗೆ ಭೂದಾನ, ಗ್ರಾಮಸ್ಥರಿಂದ ಭವ್ಯ ಸನ್ಮಾನ

ಬೀದರ:ಮೇ.5:ಭಾಲ್ಕಿ ತಾಲೂಕಿನ ಜೈನಾಪೂರ ಗ್ರಾಮದಲ್ಲಿರುವ ಶ್ರೀ ರೇವಪ್ಪಯ್ಯ ಮುತ್ಯಾ ಮಂದಿರಕ್ಕೆ ಹೋಗುವ ದಾರಿ ಹಲವು ದಶಕಗಳಿಂದಲೂ ಸಮಸ್ಯೆಯಾಗಿದ್ದು.ಗ್ರಾಮದ ಜನರು ಈ ಸಮಸ್ಯೆಯನ್ನು ಹಲವಾರು ಬಾರಿ ಗಮನಕ್ಕೆ ತಂದರೂ ಸಮರ್ಪಕ ಪರಿಹಾರ ದೊರಕಿರಲಿಲ್ಲ. ಇಂತಹ ಸಂದರ್ಭದಲ್ಲಿ ಗ್ರಾಮದ ಜಮೀನು ಮಾಲೀಕರಾದ ರಾಜಕುಮಾರ್ ನಾಯ್ಕೋಡೆ, ಲಕ್ಷ್ಮಣ ಹಲಬರ್ಗಾ, ಈಶ್ವರ್ ಮಕರಲೆ, ಸುಭಾಷ್ ಮೆತ್ರೆ, ಬಸವರಾಜ ಅತಿವಾಳ, ನಾಗನಾಥ ಬಾಳೂರ ಹಾಗೂ ವೆಂಕಟರಾವ ಬಾಳೂರ ಅವರು ಸಾರ್ವಜನಿಕ ಹಿತದೃಷ್ಟಿಯಿಂದ ತಮ್ಮ ಸ್ವಂತ ಜಮೀನಿನ ಒಂದು ಭಾಗವನ್ನು ಭೂದಾನವಾಗಿ ನೀಡಿ, ಮಂದಿರಕ್ಕೆ ಸುಗಮ ದಾರಿಯನ್ನು ನಿರ್ಮಿಸಲು ಸಹಕರಿಸಿದರು.

ಭೂದಾನಿಗಳ ಈ ಮಾನವೀಯ ಹಾಗೂ ಸಮಾಜಮುಖಿ ಕಾರ್ಯಕ್ಕೆ ಗ್ರಾಮಸ್ಥರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಸಮಸ್ತ ಜೈನಾಪೂರ ಗ್ರಾಮಸ್ಥರು ಒಟ್ಟಾಗಿ ಭೂದಾನಿಗಳನ್ನು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಗ್ರಾಮ ಹಿರಿಯರು ಮಾತನಾಡಿ, “ಇಂತಹ ದಾನಧರ್ಮಗಳು ಸಮಾಜದಲ್ಲಿ ಏಕತೆ ಹಾಗೂ ಸಹಕಾರದ ಮನೋಭಾವವನ್ನು ಬೆಳೆಸುತ್ತವೆ” ಎಂದು ಹೇಳಿದರು.

ಇದೇ ವೇಳೆ, ಭೂದಾನಿಗಳ ಲಿಂಗ ಹಸ್ತದಿಂದ ರಸ್ತೆ ನಿರ್ಮಾಣ ಕಾಮಗಾರಿಗೆ ವಿಧಿವತ್ತಾಗಿ ಚಾಲನೆ ನೀಡಲಾಯಿತು. ಗ್ರಾಮಸ್ಥರು ಈ ಯೋಜನೆ ಶೀಘ್ರ ಪೂರ್ಣಗೊಳ್ಳಲಿ ಎಂದು ಆಶಾಭಾವ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಗಣ್ಯರು, ಯುವಕರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಭೂದಾನಿಗಳ ಕಾರ್ಯವನ್ನು ಕೊಂಡಾಡಿದರು. ಈ ದಾರಿಯ ನಿರ್ಮಾಣದಿಂದ ಮುಂದಿನ ದಿನಗಳಲ್ಲಿ ಮಂದಿರಕ್ಕೆ ಆಗಮಿಸುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.
ಕರ್ನಾಟಕ ವಿಕಾಸ ರಂಗ ಅಧ್ಯಕ್ಷರಾದ ಸಂಗಮೇಶ್ವರ ಜ್ಯಾಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.