
ಚನ್ನಮ್ಮನ ಕಿತ್ತೂರ,ಅ ೧೪: ವೀರರಾಣಿ ಕಿತ್ತೂರ ಚನ್ನಮ್ಮನ ಉತ್ಸವದ ಅಂಗವಾಗಿ ವಿಚಾರ ಸಂಕೀರ್ಣದಲ್ಲಿ ರಾಜ್ಯಮಟ್ಟದ ತಜ್ಞರಿಂದ ಚನ್ನಮ್ಮನ ಐತಿಹಾಸಿಕ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಕಿತ್ತೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತ ಡಾ. ಸಂತೋಷ ಹಾನಗಲ್ ಹೇಳಿದರು.
ತಹಶೀಲ್ದಾರ ಕಚೇರಿ ಸಭಾಭವನದಲ್ಲಿ ನಡೆದ ವಿಚಾರ ಸಂಕೀರ್ಣ ಉಪಸಮಿತಿ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಬರುವ ಕಿತ್ತೂರು ಉತ್ಸವದ ಎರಡನೇ ದಿನದಂದು ಈ ಗೋಷ್ಠಿ ನಡೆಯುವುದು ಉದ್ಘಾಟಕರಾಗಿ ಶಾಸಕ ಬಾಬಾಸಾಹೇಬ ಪಾಟೀಲ ಆಗಮಿಸಲಿದ್ದಾರೆ. ರಾಜ್ಯಮಟ್ಟದ ಸುಪ್ರಸಿದ್ದ ಇತಿಹಾಸ ತಜ್ಞರು, ವಿದ್ವಾಂಸರು ಕಿತ್ತೂರು ಸಂಸ್ಥಾನ ಕುರಿತು ವಿಷಯ ಮಂಡಿಸಲಿದ್ದಾರೆ. ರಾಜ್ಯ ಹಾಗೂ ಸ್ಥಳೀಯ ವಿದ್ವಾಂಸರು ಈ ಗೋಷ್ಠಿಯಲ್ಲಿ ಪಾಲ್ಗೋಳ್ಳಲಿದ್ದಾರೆ. ಇತಿಹಾಸ ಗೋಷ್ಠಿಯಲ್ಲಿ ಶಾಲಾ-ಕಾಲೇಜ ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡುವುದರ ಮೂಲಕ ರಾಣಿ ಚನ್ನಮ್ಮನ ಇತಿಹಾಸ ಯುವಕರು ಸೇರಿದಂತೆ ಇತರರಿಗೂ ತಿಳಿಸಬಹುದು.
ಉತ್ಸವದಲ್ಲಿ ಮೆರವಣಿಗೆ ವ್ಯವಸ್ಥಿತವಾಗಿ ನಡೆಸುವುದು, ಕಲಾ ತಂಡಗಳಿಗೆ ಅಗತ್ಯ ಸೌಲಭ್ಯ ತಲುಪಿಸುವುದು. ಹೀಗೆ ಹತ್ತು ಹಲವಾರು ವಿಷಯಗಳ ಕುರಿತು ಚರ್ಚಿಸಲಾಯಿತು. ಈಗಾಗಲೇ ಎಲ್ಲ ಉಪಸಮಿತಿಗಳನ್ನು ರಚಿಸಲಾಗಿದ್ದು ಉತ್ಸವದ ಯಶಸ್ವಿಗಾಗಿ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಎಲ್ಲ ಸಮಿತಿಯವರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕರಿಂದ ವಿವಿಧ ಆಕ್ಷೇಪಣೆ: ೨೦೨೬ನೇ ಕಿತ್ತೂರು ಉತ್ಸವದ ಚಾಲನೆಗೆ ಬೆಂಗಳೂರಿನ ವಿಧಾನಸೌಧ ಬಳಿ ಸಿಎಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ, ಜಿಲ್ಲಾಧಿಕಾರಿ ಸೇರಿ ವಿವಿಧ ಇಲಾಖೆ ಸಚಿವರು, ಶಾಸಕರು, ವಿಪ ಸದಸ್ಯರು, ಹಿರಿಯ ಅಧಿಕಾರಿಗಳು ಗೈರಾಗಿದ್ದರು. ಇದು ಚನ್ನಮ್ಮನಿಗೆ ಮಾಡಿದ ಅವಮಾನ. ಉತ್ಸವಕ್ಕೆ ಹೆಚ್ಚಿನ ಮೆರಗು ಬರಬೇಕಾದರೆ ಸಲಹಾ ಸಮಿತಿ ಸದಸ್ಯರು ಕೊಡುವ ಸಲಹೆ ಗಣನೆಗೆ ತೆಗೆದುಕೊಂಡು ಅವುಗಳನ್ನು ಪಾಲಿಸಬೇಕು ಅಂದಾಗ ಮಾತ್ರ ಉತ್ಸವಕ್ಕೆ ಮೆರಗು. ಅದಲ್ಲದೇ ಮೆರವಣಿಗೆ ಮಾರ್ಗದ ಮಧ್ಯ ಕುಡಿಯುವ ನೀರಿನ ವ್ಯವಸ್ಥೆ ಇರುವುದಿಲ್ಲ. ಬಿಸಿಲು ಬಹಳ ಇರುವುದರಿಂದ ಮಾರ್ಗದ ಮಧ್ಯ ನೀರಿನ ವ್ಯವಸ್ಥೆ ಮಾಡಬೇಕು ಎಂದು ಕಾಶಿನಾಥ ಕಿನ್ನಾರಿ, ಎಲ್ಲಪ್ಪ ಕಡಕೋಳ, ರುದ್ರಪ್ಪ ಸರದಾರ ಸೇರಿದಂತೆ ಇನ್ನೂ ಅನೇಕರು ಸಲಹೆ-ಸೂಚನೆ ನೀಡಿದರು.
ಸಭೆಯಲ್ಲಿ ಬೈಲಹೊಂಗಲ ತಾಪಂ ಇಓ ಸಂಜೀವಕುಮಾರ ಜಿನ್ನೂರ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ತುಬಾಕಿ, ಪಪಂ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಅಂಗನವಾಡಿ ಮೇಲ್ವಿಚಾರಕಿ ಸರೋಜಿನಿ ಹಿರೇಮಠ, ಗಾಯತ್ರಿ ಅಜ್ಜನ್ನವರ, ರಾಜಶೇಖರ ಹಲಸಗಿ, ಸೇರಿ ಇತರ ಅಧಿಕಾರಿಗಳಿದ್ದರು.























