Home ಜಿಲ್ಲೆ ಬೆಂಗಳೂರು ಬಾನಂದರೂ ದಂಪತಿಗೆ ಆತ್ಮೀಯ ಸನ್ಮಾನ

ಬಾನಂದರೂ ದಂಪತಿಗೆ ಆತ್ಮೀಯ ಸನ್ಮಾನ

ಕೋಲಾರ,ಜೂ,೧೫- ಕನ್ನಡ ನಾಡಿನಾದ್ಯಂತ ನೂರಾರು ಮಂದಿ ಗಾಯಕರಿಗೆ ಜಾನಪದ ಗಾಯಕ ಗಾರುಡಿಗ ಬಾನಂದೂರು ಕೆಂಪಯ್ಯ ವೇದಿಕೆ ಕೊಟ್ಟು ಪ್ರೋತ್ಸಾಹಿಸಿದ್ದಾರೆಂದು ನಿವೃತ್ತ ಎಸ್ಪಿ, ಜಾನಪದ ಗಾಯಕ ಡಾ.ವೇಮಗಲ್ ನಾರಾಯಣಸ್ವಾಮಿ ಹೇಳಿದರು.


ನಗರದ ಕನ್ನಡ ಭವನದಲ್ಲಿ ಡಾ.ಬಾನಂದೂರು ಕೆಂಪಯ್ಯರ ೭೫ ನೇ ಹುಟ್ಟಹಬ್ಬ ಅಂಗವಾಗಿ ಬಾನಂದೂರು ಕೆಂಪಯ್ಯ ದಂಪತಿಗಳನ್ನು ಸನ್ಮಾನಿಸುವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಪೊಲೀಸ್ ಅಧಿಕಾರಿಯಾಗಿದ್ದ ತಮ್ಮನ್ನು ಗಾಯಕರನ್ನಾಗಿಸಿದ್ದೇ ಬಾನಂದೂರು ಕೆಂಪಯ್ಯ ಎಂದು ಹೇಳಿದ ಅವರು, ಜಾನಪದ ವಿಷಯದಲ್ಲಿ ಕೆಂಪಯ್ಯರು ಮಾಡಿರುವ ಸಂಶೋಧನೆಗಳಿಂದ ಸ್ಪೂರ್ತಿ ಪಡೆದು ತಾವು ಪಿ ಎಚ್ ಡಿ ಪ್ರಬಂಧ ಮಂಡಿಸಿದ್ದಾಗಿ ತಿಳಿಸಿದರು.


ಬಾನಂದೂರು ಕೆಂಪಯ್ಯರ ಕುರಿತು ಅಭಿನಂದನಾ ಭಾಷಣ ಮಾಡಿದ ಪತ್ರಕರ್ತ ಕೆ.ಎಸ್.ಗಣೇಶ್, ತಂದೆ ತಾಯಿಯಿಂದ ಜಾನಪದವನ್ನು ರಕ್ತಗತವಾಗಿ ಪಡೆದುಕೊಂಡಿದ್ದ ಬಾನಂದೂರು ಕೆಂಪಯ್ಯರು ಜಾನಪದ ಗಗನದಲ್ಲಿ ಬೆಳ್ಳಕ್ಕಿ ಧ್ರುವತಾರೆಯಂತೆ ಸದಾ ಮಿನುಗುತ್ತಿರುತ್ತಾರೆ, ಕೇವಲ ಗಾಯಕರಾಗಿ ಮಾತ್ರವಲ್ಲದೆ ಮೂಲ ಜಾನಪದ ಹಾಡುಗಳನ್ನು ಸಂಗ್ರಹಿಸಿ ಸಂಪಾದಿಸಿ ಕೃತಿ ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ, ಅವರ ಸ್ಪೂರ್ತಿಯಿಂದಲೇ ಕೋಲಾರ ಜಿಲ್ಲೆಯಲ್ಲೂ ನೂರಾರು ಮಂದಿ ಗಾಯಕರು ಹುಟ್ಟಿಕೊಳ್ಳುವಂತಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಶರಣಪ್ಪ ಗಬ್ಬೂರು, ಡಾ.ಬಾನಂದೂರು ಕೆಂಪಯ್ಯ ಜಾನಪದ ಕ್ಷೇತ್ರದಲ್ಲಿ ಮಾಡಿರುವ ಅಗಾಧ ಸಾಧನೆಯನ್ನು ಗುರುತಿಸಿ ಈ ನೆಲ ಈ ಜಲ ಸಾಂಸ್ಕೃತಿಕ ಸಂಸ್ಥೆಯು ಅವರ ೭೫ ನೇ ಹುಟ್ಟುಹಬ್ಬವನ್ನು ಕೋಲಾರ ನೆಲದಲ್ಲಿ ಜಾನಪದ ಗಾಯಕರ ಸಹಯೋಗದಲ್ಲಿ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.


ವೇದಿಕೆಯಲ್ಲಿ ವೇದಿಕೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಸಂಗೀತ ನಾಟಕ ಅಕಾಡೆಮಿಯ ಸದಸ್ಯ ಡಿ.ಆರ್.ರಾಜಪ್ಪ, ಗಮನ ಶಾಂತಮ್ಮ, ಗಾಂಧಿನಗರ ಮಂಜುನಾಥ್, ಸಂಗಸಂದ್ರ ವಿಜಯಕುಮಾರ್, ವಕೀಲ ಸತೀಶ್, ಮಾರ್ಜೇನಹಳ್ಳಿ ಬಾಬು, ಅಬ್ಬಣಿ ಶಿವಪ್ಪ, ಕರವೇ ಸೋಮಣ್ಣ, ಶಿವಾನಂದ ಸ್ವಾಮಿ, ಉಸ್ಮಾನ್ ಇತರರು ಉಪಸ್ಥಿತರಿದ್ದರು.


ಇದಕ್ಕೂ ಮುನ್ನ ಕನ್ನಡ ಭವನಕ್ಕೆ ಆಗಮಿಸಿದ ಡಾ.ಬಾನಂದೂರು ಕೆಂಪಯ್ಯ ಹಾಗೂ ಸುಚಿತ್ರ ದಂಪತಿಗಳನ್ನು ಜಾನಪದ ವಾದ್ಯಗಳು ಹಾಗೂ ಚಿಣ್ಣರಿಂದ ಸ್ವಾಗತಿಸಲಾಯಿತು. ಹುಟ್ಟುಹಬ್ಬ ಅಂಗವಾಗಿ ಅದ್ದೂರಿಯಾಗಿ ಸನ್ಮಾನಿಸಲಾಯಿತು.


ಈ ನೆಲ ಈ ಜಲ ಸಾಂಸ್ಕೃತಿಕ ಸಂಸ್ಥೆಯ ವೆಂಕಟಾಚಲಪತಿ ಮಾತನಾಡಿ, ಜಾನಪದ ಲೋಕದ ಗಂಧರ್ವರಾಗಿರುವ ಡಾ.ಬಾನಂದೂರು ಕೆಂಪಯ್ಯರಿಗೆ ೭೫ ಹುಟ್ಟುಹಬ್ಬ ಆಚರಿಸುವ ಸಂದರ್ಭದಲ್ಲಿ ಅವರ ಹೆಸರಿನಲ್ಲಿಯೇ ಈ ಬಾರಿ ವೇಮನ ಪದ್ಯ ಬೋಧಕ ಶ್ರೀನಿಜಾನಂದ ಸುಬ್ಬಾರೆಡ್ಡಿ ಸ್ವಾಮಿಗಳು, ಅಂತರಗಂಗೆ ಬುದ್ದಿ ಮಾದ್ಯ ಶಾಲೆಯ ಡಾ.ಕೆ.ಎಸ್.ಶಂಕರ್, ಗಮನ ಶಾಂತಮ್ಮ, ಕವಿ ಸಾಹಿತಿ ವಿ.ಲಕ್ಷ್ಮಯ್ಯ, ತತ್ವಪದಕಾರ ಹಾಸ್ಯ ಕಥೆಗಾರ ಎಂ.ಎಸ್.ಶೇಖರ್ ಹಾಗೂ ಮೊರಸುನಾಡು ಜನಪದ ಗಾಯಕ ಅರಿನಾಗನಹಳ್ಳಿ ಮುನಿವೆಂಕಟಮ್ಮರನ್ನು ಸನ್ಮಾನಿಸಲಾಗುತ್ತಿದೆ. ಇದೇ ರೀತಿ ಇನ್ನು ಮುಂದೆ ಪ್ರತಿ ವರ್ಷ ನಾಲ್ಕೈದು ಮಂದಿಗೆ ಡಾ.ಬಾನಂದೂರು ಕೆಂಪಯ್ಯರ ಹೆಸರಿನಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದರು.


ರೇಣುಕಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ ಕೋಲಾರ ನಗರದ ವಿವಿಧ ನಾಟ್ಯ ಶಾಲೆಗಳಿಂದ ಚಿಣ್ಣರು ಭರತನಾಟ್ಯ ಪ್ರದರ್ಶಿಸಿದರು.