
ಬೆಂಗಳೂರು, ಜೂ.೧೫: ಭಗವಾನ್ ಬುದ್ಧ, ಜಗಜ್ಯೋತಿ ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ಮೂಲನಿವಾಸಿ ಅಂಬೇಡ್ಕರ್ ಸಂಘ (ರಿ.) ವತಿಯಿಂದ ಇಂದಿರಾನಗರ ಕ್ಲಬ್ನ ಎಸಿ ಸಭಾಂಗಣದಲ್ಲಿ ಭಾನುವಾರ ಬೃಹತ್ “ಪ್ರತಿಭಾ ಪುರಸ್ಕಾರ-೨೦೨೬” ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಯಿತು.
ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆಗೈದ ನೂರಾರು ವಿದ್ಯಾರ್ಥಿಗಳಿಗೆ ಬೆಳ್ಳಿ ನಾಣ್ಯ ನೀಡಿ ಗೌರವಿಸಲಾಯಿತು. ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಪರಿಸರ ಜಾಗೃತಿಯ ಅಂಗವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಟುಂಬಗಳಿಗೆ ಉಚಿತವಾಗಿ ಗಿಡಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಇಂದಿರಾನಗರ ಕ್ಲಬ್ ಅಧ್ಯಕ್ಷ ಬಿ.ಎನ್.ಎಸ್. ರೆಡ್ಡಿ, ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ನಾರಾಯಣ್ ಎಂ., ಹಲಸೂರು ಉಪವಿಭಾಗದ ಎಸಿಪಿ ರಂಗಪ್ಪ ಸೇರಿದಂತೆ ಹಲವು ಗಣ್ಯರು ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ ಹಾಗೂ ಜೀವನದಲ್ಲಿ ಸಾಧನೆಯ ಕುರಿತು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಗಜಸೇನ ಫೌಂಡೇಶನ್ ಸಂಸ್ಥಾಪಕ ಗಜೇಂದ್ರ, ದಿಶಾ ಸಮಿತಿ ಸದಸ್ಯ ಕೆ.ವಿ. ನಾಗರಾಜ್, ಕೆ.ಆರ್. ಪುರಂ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಮಮೂರ್ತಿ, ಇಂದಿರಾನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆನಂದ್, ಕೋಲಾರದ ಗೌತಮ್ ಹಾಗೂ ಚಲನಚಿತ್ರ ನಿರ್ದೇಶಕ ಮಂಜು ಕವಿ ಉಪಸ್ಥಿತರಿದ್ದರು.
ಮೂಲನಿವಾಸಿ ಅಂಬೇಡ್ಕರ್ ಸಂಘದ ರಾಜ್ಯ ಸಂಚಾಲಕ ಮುನಿಮಾರಪ್ಪ, ರಾಜ್ಯ ಸಂಘಟನಾ ಸಂಚಾಲಕ ಜೈಭೀಮ್ ಶ್ರೀನಿವಾಸ್ ಹಾಗೂ ಧನರಾಜ್ ನಾಗವಂಶಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮಹಿಳಾ ಘಟಕದ ರಾಜ್ಯ ಸಂಚಾಲಕಿ ಭಾಗ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಶಿಕ್ಷಣ, ಪ್ರತಿಭಾ ಪ್ರೋತ್ಸಾಹ ಹಾಗೂ ಪರಿಸರ ಕಾಳಜಿಯನ್ನು ಒಟ್ಟಿಗೆ ಸಾರಿದ ಈ ಕಾರ್ಯಕ್ರಮ ಸಾರ್ವಜನಿಕರು ಹಾಗೂ ಪೋಷಕರಿಂದ ಮೆಚ್ಚುಗೆಗೆ ಪಾತ್ರವಾಯಿತು.



























