
ನಾಗಪುರ,ಅ.೨೧-ಭಾರತದಲ್ಲಿ ಆಡಳಿತ ಬದಲಾವಣೆಯಿಂದ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ನಿರೀಕ್ಷೆ ಸರಿಯಲ್ಲ. ಪಶ್ಚಿಮದಿಂದ ಬಂದಿರುವ ಬಿರುಗಾಳಿಯೊಂದು ಸಾಂಸ್ಕೃತಿಕ, ಮಾನವೀಯ ಹಾಗೂ ನೈತಿಕ ಮೌಲ್ಯಗಳನ್ನು ನಾಶಮಾಡಲು ಯತ್ನಿಸುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನಾಗಪುರದಲ್ಲಿ ನಡೆದ ಆರ್ಎಸ್ಎಸ್ ವಿಜಯದಶಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫ್ರಾನ್ಸ್, ಅಲ್ಬೇನಿಯಾ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆಯುತ್ತಿರುವ ಘಟನೆಗಳನ್ನು ಉಲ್ಲೇಖಿಸಿದರು. ಭಾರತವೂ ಇಂತಹ ಶಕ್ತಿಗಳ ಗುರಿಯಾಗಿದೆ. ದೇಶವನ್ನು ದುರ್ಬಲಗೊಳಿಸುವ ಮತ್ತು ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದ ಬಲಿಷ್ಠ ನಾಯಕತ್ವ, ಕಳೆದ ಕೆಲವು ದಶಕಗಳಲ್ಲಿ ಅನುಸರಿಸಿದ ನೀತಿಗಳು ಹಾಗೂ ಯುವಜನರಲ್ಲಿ ಹೆಚ್ಚುತ್ತಿರುವ ರಾಷ್ಟ್ರೀಯ ಹೆಮ್ಮೆ ಇಂತಹ ಪ್ರಯತ್ನಗಳನ್ನು ತಡೆಯಲು ನೆರವಾಗಿವೆ ಎಂದರು. ಪ್ರತಿಭಟನೆಗಳು ಪರಿಹಾರ ಕಂಡುಕೊಳ್ಳುವ ಉದ್ದೇಶ ಹೊಂದಿರಬೇಕು. ಪ್ರತಿಭಟನಾಕಾರರು, ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ಯಾವುದೇ ಕಾರಣಕ್ಕೂ ಸಮಾಜದಲ್ಲಿ ದ್ವೇಷ, ಸಂಘರ್ಷ ಹಾಗೂ ವಿಭಜನೆಗೆ ಅವಕಾಶ ನೀಡಬಾರದು. ಎಲ್ಲರೂ ಸಂವಿಧಾನ, ಕಾನೂನು ಮತ್ತು ನಾಗರಿಕ ಶಿಷ್ಟಾಚಾರದ ಮಿತಿಯಲ್ಲಿ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಭಾರತದ ಸಂಪ್ರದಾಯವು ವೈವಿಧ್ಯತೆಯನ್ನು ಸ್ವೀಕರಿಸಿ ರಕ್ಷಿಸುವುದಾಗಿದೆ. ಭಾಷೆ, ಸಮುದಾಯ ಮತ್ತು ಪಂಥಗಳ ಭಿನ್ನತೆಗಳ ನಡುವೆಯೂ ದೇಶದ ಏಕತೆಯನ್ನು ಕಾಪಾಡಬೇಕು. ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಸ್ವೀಕರಿಸಿದರೂ ಶಾಶ್ವತ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಸಂತ ರವಿದಾಸರ ೬೫೦ನೇ ಜನ್ಮವರ್ಷ, ಸ್ವಾಮಿ ಶ್ರದ್ಧಾನಂದರ ಬಲಿದಾನದ ಶತಮಾನೋತ್ಸವ, ಸ್ವಾಮಿ ಲಕ್ಷ್ಮಣಾನಂದ ಸರಸ್ವತಿಯವರ ಜನ್ಮಶತಮಾನೋತ್ಸವ ಹಾಗೂ ಮಹಾತ್ಮ ಜ್ಯೋತಿಬಾ ಫುಲೆ ಮತ್ತು ರಾಜನಾರಾಯಣ ಬಸು ಅವರ ೨೦೦ನೇ ಜನ್ಮವರ್ಷದ ಸಂದರ್ಭವನ್ನು ಸ್ಮರಿಸಿದ ಭಾಗವತ್, ಧರ್ಮ ಮತ್ತು ಸಂಪ್ರದಾಯಗಳ ರಕ್ಷಣೆಗಾಗಿ ಶ್ರಮಿಸಿದ ಮಹನೀಯರ ಆದರ್ಶಗಳನ್ನು ನೆನಪಿಸಿಕೊಳ್ಳುವುದು ಅಗತ್ಯ ಎಂದರು. ಯುವಜನರು ಒಟಿಟಿ ವಿಷಯಗಳನ್ನು ವಿವೇಚನೆಯಿಂದ ಸ್ವೀಕರಿಸುವಂತೆ, ಅವುಗಳ ಮೇಲಿನ ನಿಯಂತ್ರಣದ ಅಗತ್ಯವನ್ನೂ ಪ್ರಸ್ತಾಪಿಸಿದರು.
























