Home Lead News ಕ. ಕರ್ನಾಟಕಕ್ಕೆ ಭರಪೂರ ಯೋಜನೆ

ಕ. ಕರ್ನಾಟಕಕ್ಕೆ ಭರಪೂರ ಯೋಜನೆ

ಬೆಂಗಳೂರು, ಸೆ. ೧೭- ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭರಪೂರ ಯೋಜನೆಗಳನ್ನು ಘೋಷಿಸಿದ್ದು, ಕಲ್ಯಾಣ ಕರ್ನಾಟಕ ಎಕಾನಮಿ ಮಿಷನ್, ಜೈವಿಕ ಆರ್ಥಿಕ ಮಿಷನ್, ಐಟಿ ಪಾರ್ಕ್ ಸ್ಥಾಪನೆ, ಪ್ರವಾಸೋದ್ಯಮ ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಪ್ರಕಟಿಸಿದ್ದಾರೆ.


ಕಲ್ಯಾಣ ಕರ್ನಾಟಕ ವಿಮೋಚನಾ ದಿನವಾದ ಇಂದು ಕಲ್ಬುರ್ಗಿಯಲ್ಲಿಂದು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕಲ್ಯಾಣ ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಹೂಡಿಕೆಗೆ ವೇಗ ನೀಡಲು ಸರ್ಕಾರವು ಸೆಕ್ಷನ್-೮ ಕಂಪೆನಿಯಾಗಿ ಕಲ್ಯಾಣ ಕರ್ನಾಟಕ ಎಕಾನಮಿ ಮಿಷನ್ ಸ್ಥಾಪಿಸಲಿದೆ ಎಂದರು.


ಈ ಮಿಷನ್ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಆರ್ಷಿಸಲು ಮತ್ತು ಈ ಪ್ರದೇಶದಲ್ಲಿ ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಲು ನೆರವಾಗಲಿದೆ ಎಂದರು.
ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಮೂಲಕ ರೈತರ ಆದಾಯ ಹೆಚ್ಚಿಸಲು ಸರ್ಕಾರವು ಜೈವಿಕ, ಆರ್ಥಿಕ ಮಿಷನ್ ಸ್ಥಾಪಿಸಲಿದೆ. ತೊಗರಿಬೇಳೆ, ಕಮಲಾಪುರ ಬಾಳೆಹಣ್ಣು, ಒಣದ್ರಾಕ್ಷಿ ಮತ್ತು ಸಿರಿಧಾನ್ಯಗಳು ಸೇರಿದಂತೆ ಈ ಪ್ರದೇಶದ ಪ್ರಮುಖ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಇದು ಒತ್ತು ನೀಡಲಿದೆ ಎಂದರು.


ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ಕಲ್ಬುರ್ಗಿ ನಗರದ ಮೂಲಸೌಕರ್ಯ ಅಭಿವೃದ್ಧಿಗೂ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹೊಸ ಫೆರಿಫೆರಲ್ ರಿಂಗ್ ರೋಡ್ ನಿರ್ಮಾಣ ಜತೆಗೆ ೩೦ ಕೋಟಿ ರೂ. ವೆಚ್ಚದಲ್ಲಿ ಕಲ್ಬುರ್ಗಿ ನಗರದ ಹೊಸ ಕೆರೆ ಮತ್ತು ಮನರಂಜನಾ ಉದ್ಯಾನವನವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.


ಐಟಿ ಮತ್ತು ನಾವೀನ್ಯತಾ ಕ್ಷೇತ್ರದ ಬೆಳವಣಿಗೆಯನ್ನು ಬೆಂಗಳೂರಿನ ಆಚೆಗೂ ವಿಸ್ತರಿಸಲು ಕಲ್ಬುರ್ಗಿಯಲ್ಲಿ ೩೦ ಎಕರೆ ಪ್ರದೇಶದಲ್ಲಿ ಐ.ಟಿ. ಪಾರ್ಕ್ ಅಭಿವೃದ್ಧಿ ಪಡಿಸಲಾಗುವುದು. ಜತೆಗ ಕಲ್ಬುರ್ಗಿ ಸಂಶೋಧನೆ, ಆವಿಷ್ಕಾರ ಮತ್ತು ಯುವ ಜನತೆಗೆ ಉತ್ತೇಜನ ನೀಡುವ ಕ್ರಿಯಾ ಸಂಸ್ಥೆಯನ್ನು ಸ್ಥಾಪಿಸಲಾಗುವುದು ಎಂದರು.


ಕಲ್ಯಾಣ ಕರ್ನಾಟಕ ಭಾಗವನ್ನು ಕಾಡುತ್ತಿರುವ ರಕ್ತಹೀನತೆಯ ಸಮಸ್ಯೆ ಪರಿಹಾರಕ್ಕೂ ಗಮನ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ರಕ್ತಹೀನತೆ ವಿರುದ್ಧ ವಿಶೇಷ ಅಭಿಯಾನ ಕೈಗೊಂಡು ಗರ್ಭಿಣಿಯರು, ಹದಿಹರೆಯದವರು ಹಾಗೂ ಬಾಣಂತಿಯರ ಮೇಲೆ ಹೆಚ್ಚಿನ ಗಮನ ಹರಿಸಿ, ಮುಂದಿನ ೨ ವರ್ಷಗಳ ಕಾಲ ತಪಾಸಣೆ, ತಡೆಗಟ್ಟುವಿಕೆ, ಚಿಕಿತ್ಸೆಗೆ ಈ ಅಭಿಯಾನ ನೆರವಾಗಲಿದೆ ಎಂದು ಅವರು ಹೇಳಿದರು.


ರಾಜ್ಯದಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚುವ ಗುರಿಯನ್ನು ನಮ್ಮ ಸರ್ಕಾರ ಹೊಂದಿದ್ದು, ಕಲ್ಬುರ್ಗಿ ಜಿಲ್ಲೆಯಲ್ಲಿ ೫೦ ಸಾವಿರ ವಸತಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.


ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಸಾರ್ವಜನಿಕ ಸುರಕ್ಷತೆ, ಅಪರಾಧ ತಡೆ ಮತ್ತು ಸಂಚಾರ ನಿರ್ವಹಣೆಯನ್ನು ಬಲಪಡಿಸಲು ಕಲ್ಬುರ್ಗಿ ನಗರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಎ.ಐ. ಆಧಾರಿತ ಸಿಸಿಟಿವಿ ವ್ಯವಸ್ಥೆ ಅಳವಡಿಸಲಾಗುವುದು. ಜತೆಗೆ ಸ್ಥಳೀಯ ಸಂಸ್ಥೆಗಳ ತ್ಯಾಜ್ಯ ನಿರ್ವಹಣೆಗೂ ಈ ಜಾಲವನ್ನು ಬಳಸಲಾಗುವುದು ಎಂದರು.


ಕಲ್ಯಾಣ ಕರ್ನಾಟಕ ಭಾಗದ ಪ್ರವಾಸೋದ್ಯಮ ಮತ್ತು ಪಾರಂಪರಿಕ ತಾಣಗಳ ಅಭಿವೃದ್ಧಿಗೂ ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಳ್ಳಲಿದೆ. ಕಲ್ಬುರ್ಗಿ ಕೋಟೆ, ಶರಣ ಬಸವೇಶ್ವರ ದೇವಸ್ಥಾನ, ಖ್ವಾಜಾ ಬಂದೆ ನವಾಜ್ ದರ್ಗಾ, ಬುದ್ಧ ವಿಹಾರ, ಮಡಕೇಡ, ಸನ್ನತಿ ಮತ್ತು ಗಾಣಗಾಪುರವನ್ನು ಸಂಪರ್ಕಿಸುವ ಪುಣ್ಯ ಯಾತ್ರಾ ಸರ್ಕ್ಯೂಟ್ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು.


ಕೆಕೆಆರ್‌ಡಿಬಿ ಅನುದಾನದ ಮೂಲಕ ಮಡಕೇಡ, ನಾಗಾವಿ, ಕಾಳಗಿ ಮತ್ತು ಸನ್ನತಿಯ ಪಾರಂಪರಿಕ ತಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಗಾಣಗಾಪುರವನ್ನು ಮೊದಲ ಹಂತದಲ್ಲಿ ೫೦ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.


ಬಸವಣ್ಣನವರ ತತ್ವಗಳು ಮತ್ತು ವಚನ ಪರಂಪರೆಯನ್ನು ಯುವ ಪೀಳಿಗೆಗೆ ತಲುಪಿಸಲು ಕಲ್ಬುರ್ಗಿಯಲ್ಲಿ ವಚನ ಮಂಟಪ ಸ್ಥಾಪಿಸಲಾಗುವುದು ಎಂದರು.
ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೂ ಒತ್ತು ನೀಡಲಾಗುವುದು. ಕಲ್ಬುರ್ಗಿ ತಾಲ್ಲೂಕಿನ ಹಡಗಿಲ ಹಾರುತಿ ಗ್ರಾಮದಲ್ಲಿ ಕ್ರೀಡಾ ನಗರಿ ಸ್ಥಾಪಿಸಲಾಗುವುದು. ಜತೆಗೆ ಕ್ರಿಕೆಟ್ ಸೌಲಭ್ಯ ಅಭಿವೃದ್ಧಿಪಡಿಸಲು ಕೆಸಿಎ ಜತೆ ಒಡಂಬಡಿಕೆ ಮಾಡಿಕೊಳ್ಳುವುದಾಗಿಯೂ ಹೇಳಿದರು.


ಹಸಿರು ಹೊದಿಕೆಯನ್ನು ಹೆಚ್ಚಿಸಲು ಮತ್ತು ಹವಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಮುಂದಿನ ೨ ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ೧ ಕೋಟಿ ವೃಕ್ಷ ನೆಟ್ಟು ಪೋಷಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ ಎಂದು ಅವರು ತಿಳಿಸಿದರು.


ಇದಕ್ಕೂ ಮೊದಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ೭೯ನೇ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ ಪಥಸಂಚಲನವನ್ನು ವೀಕ್ಷಿಸಿದರು. ಜತೆಗೆ ಸರ್ಧಾರ್ ವಲ್ಲಭಬಾಯ್ ಪಟೇಲ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ, ಸಚಿವರಾದ ಪ್ರಿಯಾಂಕ್ ಖರ್ಗೆ, ಸಂಸದ ರಾಧಾಕೃಷ್ಣ ದೊಡ್ಡಮನಿ, ನೀತಿ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್, ಶಾಸಕರುಗಳಾದ ಎಂ.ವೈ. ಪಾಟೀಲ್, ಅಲ್ಲಮಪ್ರಭು ಪಾಟೀಲ, ಖನೀಜ್ ಫಾತೀಮಾ, ಬಸವರಾಜ ಮತ್ತಿಮಡು, ತಿಪ್ಪಣ್ಣಪ್ಪ ಕನಕನೂರ, ಜಗದೇವ್ ಗುತ್ತೇದಾರ್, ಶಶಿಲ್ ನಮೋಶಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

೩೨ ಸಾವಿರ ಹುದ್ದೆಗಳು ಕಲ್ಯಾಣ ಕರ್ನಾಟಕಕ್ಕೆ


ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪ್ರತಿ ವರ್ಷ ೫ ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಮುಂದೆ ರಾಜ್ಯ ಸರ್ಕಾರ ಭರ್ತಿ ಮಾಡಲಿರುವ ೭೨ ಸಾವಿರ ಹುದ್ದೆಗಳಲ್ಲಿ ೩೨ ಸಾವಿರ ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗದ ಯುವ ಜನರಿಗೆ ಸಿಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.


ಕಲ್ಯಾಣ ಕರ್ನಾಟಕ ಭಾಗಕ್ಕೆ ಕಾಂಗ್ರೆಸ್ ಪಕ್ಷ ದೊಡ್ಡ ಕೊಡುಗೆ ನೀಡಿದೆ. ಸರ್ದಾರ್ ವಲ್ಲಭಬಾಯ್ ಪಟೇಲ್, ನೆಹರುರವರು ಕಲ್ಯಾಣ ಕರ್ನಾಟಕವನ್ನು ಕಾಪಾಡಿದರು. ಅದೇ ರೀತಿ ಸೋನಿಯಾಗಾಂಧಿ, ಮನಮೋಹನ್ ಸಿಂಗ್, ಮಲ್ಲಿಕಾರ್ಜುನ ಖರ್ಗೆಯವರು ೩೭೧ ಜೆ ಜಾರಿ ಮಾಡಿದರು ಎಂದು ಹೇಳಿದರು.


ಬಂಜಾರ ಸಮುದಾಯವನ್ನು ಪರಿಶಿಷ್ಟ ಪಟ್ಟಿಗೆ ಸೇರ್ಪಡೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದು, ನಮ್ಮ ಕೈ ಹಿಡಿದ ನಿಮ್ಮನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿಯಿಂದ ಸಮಗ್ರ ಕರ್ನಾಟಕದ ಪ್ರಗತಿಯಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.