Home ಜಿಲ್ಲೆ ಶಿಕ್ಷಣದಷ್ಟೇ ದೈಹಿಕ ಶಿಕ್ಷಣ, ಕ್ರೀಡೆಗೂ ಆದ್ಯತೆ ನೀಡಿ: ಲಕ್ಷ್ಮಣ ನಿಂಬರಗಿ

ಶಿಕ್ಷಣದಷ್ಟೇ ದೈಹಿಕ ಶಿಕ್ಷಣ, ಕ್ರೀಡೆಗೂ ಆದ್ಯತೆ ನೀಡಿ: ಲಕ್ಷ್ಮಣ ನಿಂಬರಗಿ

ವಿಜಯಪುರ, ಸೆ. 17:
ಶಿಕ್ಷಣಕ್ಕೆ ನೀಡುವಷ್ಟೇ ಮಹತ್ವವನ್ನು ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳಿಗೂ ನೀಡಬೇಕು. ಕ್ರೀಡೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಏಕಾಗ್ರತೆ, ತಂಡದ ಸಹಕಾರ ಹಾಗೂ ಆತ್ಮವಿಶ್ವಾಸ ಬೆಳೆಸುತ್ತದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.
ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಶ್ರೀ ಬಿ.ಎಂ. ಪಾಟೀಲ ನಸಿರ್ಂಗ್ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕಲಬುರಗಿ ವಿಭಾಗೀಯ ಪುರುಷರ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಗೆಲುವು-ಸೋಲು ಸಹಜ. ಗೆಲುವನ್ನು ವಿನಯದಿಂದ ಸ್ವೀಕರಿಸುವುದು, ಸೋಲಿನಿಂದ ಪಾಠ ಕಲಿತು ಮತ್ತೆ ಪ್ರಯತ್ನಿಸುವುದು ಹಾಗೂ ಸಹ ಆಟಗಾರರೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುವ ಗುಣಗಳನ್ನು ಕ್ರೀಡೆ ಕಲಿಸುತ್ತದೆ. ಈ ಗುಣಗಳು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಜೀವನಕ್ಕೂ ಸಹಕಾರಿಯಾಗುತ್ತವೆ ಎಂದರು.
ಕಬಡ್ಡಿಯಂತಹ ದೇಶಿ ಕ್ರೀಡೆಗಳು ದೈಹಿಕ ಸಾಮಥ್ರ್ಯದ ಜೊತೆಗೆ ಏಕಾಗ್ರತೆ, ವೇಗ, ತಂತ್ರಗಾರಿಕೆ ಮತ್ತು ತಂಡದ ಸಹಕಾರವನ್ನು ಬೆಳೆಸುತ್ತವೆ. ದೇಶಿ ಕ್ರೀಡೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ಕ್ರೀಡಾ ಸಂಸ್ಕøತಿಯನ್ನು ಬಲಪಡಿಸಬೇಕು ಎಂದು ತಿಳಿಸಿದರು.
ಮೊಬೈಲ್ ಹಾಗೂ ಇತರ ಚಟುವಟಿಕೆಗಳಿಗೆ ಸೀಮಿತವಾಗದೆ ವಿದ್ಯಾರ್ಥಿಗಳು ದೈಹಿಕ ಚಟುವಟಿಕೆ ಮತ್ತು ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ನಿಯಮಿತ ಕ್ರೀಡಾಭ್ಯಾಸ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಉಲ್ಲಾಸಕ್ಕೂ ಸಹಕಾರಿ. ಕ್ರೀಡೆಯನ್ನು ವೃತ್ತಿಯನ್ನಾಗಿಸಿಕೊಂಡು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಹುದು. ಸರ್ಕಾರಗಳು ಕ್ರೀಡಾಪಟುಗಳಿಗೆ ಉದ್ಯೋಗ ಸೇರಿದಂತೆ ಹಲವು ಅವಕಾಶಗಳನ್ನು ಕಲ್ಪಿಸುತ್ತಿದ್ದು, ವಿದ್ಯಾರ್ಥಿಗಳು ತಮ್ಮಲ್ಲಿನ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಶ್ರೀ ಬಿ.ಎಂ. ಪಾಟೀಲ ನಸಿರ್ಂಗ್ ಕಾಲೇಜಿನ ಪ್ರಾಚಾರ್ಯ ಡಾ. ಶಾಲ್ಮೊನ್ ಚೋಪಡೆ ಮಾತನಾಡಿದರು.
ಬಿ.ಎಲ್.ಡಿ.ಇ. ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಎಸ್. ಕೋರಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕಲಬುರಗಿ ವಿಭಾಗೀಯ ಸಂಯೋಜಕ ಹಾಗೂ ದೈಹಿಕ ಶಿಕ್ಷಣ ವಿಭಾಗದ ಕೈಲಾಸ ಹಿರೇಮಠ, ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ಕ್ರೀಡಾ ವಿಭಾಗದ ಮುಖ್ಯಸ್ಥ ಅನಿಲ ಪಡಗಾನೂರ ಉಪಸ್ಥಿತರಿದ್ದರು.
ಡಾ. ಅಮಿತಕುಮಾರ ಬಿರಾದಾರ ಸ್ವಾಗತಿಸಿದರು. ಡಾ. ಜಯಶ್ರೀ ಪೂಜಾರಿ ಹಾಗೂ ಭಾಗ್ಯಶ್ರೀ ಬಾಗೇವಾಡಿ ನಿರೂಪಿಸಿದರು. ಅನಿಲ ಪಡಗಾನೂರ ವಂದಿಸಿದರು.