
ಪುತ್ತೂರು: ಬೆಂಗಳೂರಿನ ಬಂಟ್ಸ್ ಭವನದಲ್ಲಿ ನ.೨೨ರಂದು ಕರ್ನಾಟಕ ಮರಾಟಿ ಸಂಘದ ವತಿಯಿಂದ ಆಯೋಜಿಸಿರುವ `ಪಶ್ಚಿಮ ಘಟ್ಟದ ತಪ್ಪಲಿನ ಬುಡಕಟ್ಟು ಮರಾಟಿ ಸಮುದಾಯದ ಸಮಾವೇಶ’ಕ್ಕೆ ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟದ ಯಾವುದೇ ಸಂಬAಧವಿಲ್ಲ. ಈ ಸಮಾವೇಶದಲ್ಲಿ ಒಕ್ಕೂಟದ ವ್ಯಾಪ್ತಿಯ ಮರಾಟಿ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಬಾರದು ಎಂದು ನಿರ್ಣಯಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ಸೇರದ ಕುಡುಬಿ ಜನಾಂಗದವರನ್ನು ಒಳಗೊಂಡು ಸಮಾವೇಶ ಆಯೋಜಿಸಲಾಗುತ್ತಿದೆ. ಇದರಿಂದ ನೈಜ ಪರಿಶಿಷ್ಟ ಪಂಗಡದ ಮರಾಟಿ ಮತ್ತು ಕೊಡಗು ಮರಾಠ ಸಮುದಾಯದವರಿಗೆ ಸರಕಾರದ ಮೀಸಲಾತಿ ಹಾಗೂ ಇತರ ಸೌಲಭ್ಯಗಳು ದೊರೆಯುವಲ್ಲಿ ತೊಂದರೆಯಾಗುವ ಆತಂಕವಿದೆ. ಈ ಕುರಿತು ಕರ್ನಾಟಕ ಮರಾಟಿ ಸಂಘವು ರಾಜ್ಯ ಮರಾಟಿ ಒಕ್ಕೂಟದೊಂದಿಗೆ ಯಾವುದೇ ಪೂರ್ವಭಾವಿ ಚರ್ಚೆ ನಡೆಸದೆ ಸಮಾವೇಶ ಆಯೋಜಿಸಿರುವುದು ಸರಿಯಾದ ಕ್ರಮವಲ್ಲ ಎಂದರು. ಒಕ್ಕೂಟದ ನಿರ್ಣಯದಂತೆ ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಯಾರೂ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಮಲ, ಸಂವಾದ ಸಂಚಾಲಕ ಯಶವಂತ ಮಂಡೆಕೋಲು, ಸಂಘಟನಾ ಕಾರ್ಯದರ್ಶಿ ದಾಮೋದರ ನಾಯ್ಕ ನಾಗನಮಜಲು, ಪ್ರಚಾರ ಸಮಿತಿ ಸಂಚಾಲಕ ಬಾಲಕೃಷ್ಣ ನಾಯ್ಕ ಹಾಗೂ ಶಿಕ್ಷಣ ಸಂಚಾಲಕಿ ಮಂಜುಳಾ ಪೆರುವಾಯಿ ಉಪಸ್ಥಿತರಿದ್ದರು.





















