Home ಜಿಲ್ಲೆ ಮಂಗಳೂರು ಧರ್ಮ, ರಾಜಕೀಯರಹಿತ ಸಹಕಾರಿ ಸಂಘ: ಸವದಿ ಆಶಯ

ಧರ್ಮ, ರಾಜಕೀಯರಹಿತ ಸಹಕಾರಿ ಸಂಘ: ಸವದಿ ಆಶಯ

ಬೆಳ್ತಂಗಡಿ : ಪದವೀಧರ ಯುವಜನತೆಗೆ ಆರು ತಿಂಗಳ ತರಬೇತಿ ಜತೆಗೆ ಪ್ರಮಾಣ ಪತ್ರ ಹಾಗೂ ಪರವಾನಗಿ ನೀಡಿ ಅವರ ಮೂಲಕ ಸಹಕಾರಿ ಸಂಘಗಳ ಲೆಕ್ಕ ಪರಿಶೋಧನೆ ನಡೆಸುವ ಕುರಿತು ಯೋಜನೆ ರೂಪಿಸಲಾಗಿದೆ. ಇದು ಉದ್ಯೋಗ ಸೃಷ್ಟಿ ಹಾಗೂ ಯುವ ಜನತೆಗೆ ಆದಾಯದ ಮೂಲವಾಗಲಿದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಹೇಳಿದರು.ಬುಧವಾರ ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಗಮ ಸಭಾಭವನ, ಗೋದಾಮು ಕಟ್ಟಡ ಉದ್ಘಾಟನೆ ಪಾಂಚಜನ್ಯ ೭೫ ನೇ ವರ್ಷದ ಅಮೃತ ಮಹೋತ್ಸವ ಹಾಗೂ ೭೩ನೇ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಕಾರಿ ಸಂಘಗಳು ಧರ್ಮ ರಾಜಕೀಯ ಹೊರತಾಗಿ ಇರಬೇಕು. ಸಹಕಾರಿ ಸಂಘಗಳ ವಿಶಿಷ್ಟತೆ, ಗೌರವ ಇನ್ನಷ್ಟು ಹೆಚ್ಚಬೇಕು ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಸಹಕಾರಿ ವ್ಯವಸ್ಥೆಗೆ ದೇಶದಲ್ಲೇ ಅವಿಭಜಿತ ದ.ಕ. ಜಿಲ್ಲೆ ಮಾದರಿಯಾಗಿದೆ. ಈ ಬಾರಿ ಜಿಲ್ಲೆಗೆ ಬೆಳೆವಿಮೆಯಲ್ಲಿ ಉಂಟಾಗಿರುವ ತಾರತಮ್ಯ ಸರಿಪಡಿಸಬೇಕು ಹಾಗೂ ಶೂನ್ಯ ಬಡ್ಡಿ ದರದ ಸಾಲ ೫ ಲಕ್ಷಕ್ಕೆ ಏರಿಕೆಯಾಗಿದ್ದರು ಇದರಿಂದ ಹೆಚ್ಚಿನ ರೈತರು ವಂಚಿತರಾಗಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪೆರಾಡಿ ಸೊಸೈಟಿ ಅಧ್ಯಕ್ಷ ಸಹಕಾರ ರತ್ನ ಸತೀಶ್ ಕೆ. ಕಾಶಿಪಟ್ಣ ಮಾತನಾಡಿ, ಸಂಘದಲ್ಲಿ ೩,೨೮೯ ಸದಸ್ಯರಿದ್ದು ಎರಡು ಕೋಟಿ ರು. ಗಳಿಗಿಂತ ಅಧಿಕ ಪಾಲು ಬಂಡವಾಳ, ೫೭ ಕೋಟಿ ರು. ಠೇವಣಿ ಇದ್ದು ಕಳೆದ ಆರ್ಥಿಕ ವರ್ಷದಲ್ಲಿ ೪೨೬ ಕೋಟಿ ರು..ಗಿಂತ ಅಧಿಕ ವ್ಯವಹಾರ ನಡೆಸಿ ಒಂದು ಕೋಟಿ ರು.ಗಿಂತ ಅಧಿಕ ಲಾಭಗಳಿಸಿ ಸದಸ್ಯರಿಗೆ ಶೇ. ೨೦ ಡಿವಿಡೆಂಡ್ ನೀಡಲಾಗಿದೆ ಎಂದರು.ಉತ್ತಮ ಹೈನುಗಾರರಿಗೆ ಸನ್ಮಾನವನ್ನು ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ನೆರವೇರಿಸಿದರು. ವಸತಿ ಸಮುಚ್ಛಯ ಉದ್ಘಾಟನೆಯನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಸಹಕಾರಿ ಸಪ್ತಾಹ ಉದ್ಘಾಟನೆಯನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ನೆರವೇರಿಸಿದರು.
ರೈತ ಸಂಗಮ ಸ್ಮರಣ ಸಂಚಿಕೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಬಿಡುಗಡೆಗೊಳಿಸಿದರು. ಸಹಕಾರಿ ಜಾಥಾಕ್ಕೆ ಶ್ರೀ ಕ್ಷೇತ್ರ ಪಡ್ಯಾರಬೆಟ್ಟದ ಅನುವಂಶೀಯ ಆಡಳಿತದಾರರಾದ ಎ. ಜೀವಂಧರ್ ಕುಮಾರ್ ಯಾನೆ ಕಂಚಿಪೂವಣಿಯವರು ಚಾಲನೆ ನೀಡಿದರು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಸಹಕಾರಿ ಧ್ವಜಾರೋಹಣ ನೆರವೇರಿಸಿದರು.
ಕಚೇರಿ ಉದ್ಘಾಟನೆಯನ್ನು ಶಿರ್ತಾಡಿ ಕಾರ್ಮೆಲ್ ಮಾತೆಯ ದೇವಾಲಯ ಧರ್ಮಗುರು ಫಾ.ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ, ಉತ್ತಮ ಸಂಘಗಳಿಗೆ ಗೌರವಾರ್ಪಣೆಯನ್ನು ಶ್ರೀ.ಕ್ಷೇ.ಧ.ಗ್ರಾ.ಯೋ.ಬಿಸಿಟ್ರಸ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಸಭಾ ಕೊಠಡಿಯ ಉದ್ಘಾಟನೆಯನ್ನು ತಾಲೂಕು ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ, ವಿಶೇಷ ಸಾಧಕರಿಗೆ ಸನ್ಮಾನವನ್ನು ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಕ್ಯಾಲೆಂಡರ್ ಬಿಡುಗಡೆಯನ್ನು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್.ರಮೇಶ್ ನೆರವೇರಿಸಿದರು.ಪಂಚ ಗ್ಯಾರಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ವಿ. ಹಿರೇಮಠ, ಉಪಾಧ್ಯಕ್ಷ ನೀಲಯ್ಯ, ಕೆಎಂಎಫ್ ನಿರ್ದೇಶಕ ಪ್ರಭಾಕರ್ ಆರಂಬೋಡಿ, ಹಾಗೂ ಪುತ್ತೂರು ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎಂ.ರಘು, ಸಂಘದ ಮಾಜಿ ಅಧ್ಯಕ್ಷ ಹೇಮರಾಜ್, ತಾಲೂಕಿನ ಸಹಕಾರಿ ಸಂಘಗಳ ಅಧ್ಯಕ್ಷರು ಇದ್ದರು.ಸಂಘದ ಉಪಾಧ್ಯಕ್ಷ ಶ್ರೀಪತಿ ಉಪಾಧ್ಯಾಯ, ನಿರ್ದೇಶಕ ಎನ್.ಆರ್.ಸೀತಾರಾಮ ರೈ, ಪ್ರವೀಣ್ ಗಿಲ್ಬರ್ಟ್ ಪಿಂಟೋ, ದೇವಕಿ ಡಿ.ಶೆಟ್ಟಿ, ಸುಜಾತಾ, ಕೃಷ್ಣಪ್ಪ, ರಾಜೇಶ್ ಎನ್.ಶೆಟ್ಟಿ, ಸುರೇಶ್ ಅಂಚನ್, ಅಕ್ಷಯ ಕುಮಾರ್, ವಿಜಯ ನಾಯ್ಕ ಹಾಗೂ ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಕೊಟ್ಯಾನ್ ಮತ್ತು ಸಿಇಒ ಹೇಮಾ ಭಾಗವಹಿಸಿದ್ದರು.ಶಿಕ್ಷಕ ಅಜಿತ್ ಕುಮಾರ್ ನಿರೂಪಿಸಿದರು.೧೦ ಲಕ್ಷ ರು. ಸಹಾಯಧನ: ಡಾ.ಎಂಎನ್‌ಆರ್‌ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಸಹಕಾರ ಸಂಘಗಳು ಹೆಸರಿಗಾಗಿ ದುಡಿಯಬಾರದು. ಜನರಿಗೆ ಸೇವೆ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಯೋಜನೆಗಳನ್ನು ರೂಪಿಸಬೇಕು. ನವೋದಯ ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಿದೆ. ಮಹಿಳೆಯರು ಪಡೆಯುವ ಸಾಲಗಳು ಯಾವುದೇ ಒತ್ತಡವಿಲ್ಲದೆ ಶೇ. ೧೦೦ ಮರುಪಾವತಿಯಾಗುತ್ತಿರುವುದು ಶ್ಲಾಘನೀಯ. ಪೆರಾಡಿ ಸೊಸೈಟಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ನೂತನ ಕಟ್ಟಡಕ್ಕೆ ೧೦ ಲಕ್ಷ ರು. ಸಹಾಯಧನ ನೀಡಲಾಗುವುದು. ರೈತರ ಹಿತ ಚಿಂತನೆ, ಗ್ರಾಮೀಣ ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.