Home ಕ್ರೈಂ ಸುದ್ದಿಗಳು ಸರ್ಕಾರದ ಹಣ ದುರುಪಯೋಗ ಪ್ರಕರಣ: ಇಬ್ಬರಿಗೆ ಜೈಲು ಶಿಕ್ಷೆ

ಸರ್ಕಾರದ ಹಣ ದುರುಪಯೋಗ ಪ್ರಕರಣ: ಇಬ್ಬರಿಗೆ ಜೈಲು ಶಿಕ್ಷೆ

ಯಾದಗಿರಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳದೆ, ದಾಖಲೆಗಳನ್ನು ನಿರ್ವಹಿಸದೆ ಸರ್ಕಾರದ ಹಣ ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಯಾದಗಿರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ.13ರಂದು ಮಹತ್ವದ ತೀರ್ಪು ನೀಡಿದೆ.

ಸುರಪುರ ತಾಲ್ಲೂಕಿನ ಹೇಮನೂರು ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳದೆ, ಎನ್‍ಎಂಆರ್ (ನಮೂನೆ) ರಚಿಸದೆ, ಮಾಪನ ಪುಸ್ತಕ (ಎಂಬಿ) ದಾಖಲಿಸದೆ ಹಾಗೂ ನಗದು ಪುಸ್ತಕ ನಿರ್ವಹಿಸದೆ, ಪಂಚಾಯಿತಿ ಅಧಿಕಾರಿಗಳು ಮತ್ತು ಸಂಬಂಧಪಟ್ಟವರು ಶಾಮೀಲಾಗಿ ಸುಮಾರು 13.57 ಲಕ್ಷ ರೂ. ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಕೇಳಿಬಂದಿತ್ತು.

ಈ ಕುರಿತು ಯಾದಗಿರಿ ಲೋಕಾಯುಕ್ತ ಪೆÇಲೀಸ್ ಠಾಣೆಯಲ್ಲಿ 2013ರಲ್ಲಿ ಗುನ್ನೆ ನಂ. 01/2013ರ ಅಡಿಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯ ಕಲಂ 13(1)(ಸಿ) ಹಾಗೂ ಭಾರತೀಯ ದಂಡ ಸಂಹಿತೆಯ ಕಲಂ 420, 406, 408 ಮತ್ತು 409ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೆÇಲೀಸ್ ನಿರೀಕ್ಷಕ ಬಿ.ಬಿ. ಪಾಟೀಲ ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಯಾದಗಿರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮರುಳಸಿದ್ಧಾರಾಧ್ಯ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹೇಮನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಎರಡನೇ ಆರೋಪಿ ದೇವನಗೌಡ ನಿಡುಗುಂದಿ ಅವರಿಗೆ 20 ಸಾವಿರ ರೂ. ದಂಡ ಹಾಗೂ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಮೂರನೇ ಆರೋಪಿ ಹೇಮನೂರಿನ ಸಿದ್ಧಪ್ಪ ಅವರಿಗೆ 2 ಸಾವಿರ ರೂ. ದಂಡ ಹಾಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಕರಣದ ಮೊದಲನೇ ಆರೋಪಿ ಹಾಗೂ ಗ್ರಾಮ ಪಂಚಾಯಿತಿ ಪಿಡಿಒ ಮಾನಪ್ಪ ಕೊಂಗಂಡಿಕರ್ ಮತ್ತು ನಾಲ್ಕನೇ ಆರೋಪಿ ರಾಜ ರಾಮಪ್ಪ ನಾಯಕ ಮೃತಪಟ್ಟಿರುವುದಾಗಿ ಪ್ರಕರಣದ ವಿವರದಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕ ಲೋಕಾಯುಕ್ತ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ವಿಶ್ವನಾಥ ಉಭಾಳೆ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಲೋಕಾಯುಕ್ತ ಪೆÇಲೀಸ್ ಠಾಣೆಯ ಸಿಬ್ಬಂದಿ ರಾಮುನಾಯಕ ಎಚ್.ಸಿ. ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸರ್ಕಾರಿ ಯೋಜನೆಗಳ ಹಣ ದುರುಪಯೋಗಕ್ಕೆ ಕಾನೂನಿನ ಕಠಿಣ ಕ್ರಮ ಎದುರಾಗಲಿದೆ ಎಂಬ ಸಂದೇಶವನ್ನು ಈ ತೀರ್ಪು ನೀಡಿದೆ