Home ಜಿಲ್ಲೆ ಕಲಬುರಗಿ ಬ್ರಿಯಾನ್ ಥಾಮಸ್ ಭರ್ಜರಿ ಶತಕ: ವೆಂಗ್‍ಸರ್ಕಾರ್ ಕ್ರಿಕೆಟ್ ಅಕಾಡೆಮಿ ವಿರುದ್ಧ ಕೆಐಒಸಿ ತಂಡಕ್ಕೆ 7 ವಿಕೆಟ್‍ಗಳ...

ಬ್ರಿಯಾನ್ ಥಾಮಸ್ ಭರ್ಜರಿ ಶತಕ: ವೆಂಗ್‍ಸರ್ಕಾರ್ ಕ್ರಿಕೆಟ್ ಅಕಾಡೆಮಿ ವಿರುದ್ಧ ಕೆಐಒಸಿ ತಂಡಕ್ಕೆ 7 ವಿಕೆಟ್‍ಗಳ ಭರ್ಜರಿ ಜಯ

ಕಲಬುರಗಿ: ವಿಕೆಟ್ ಕೀಪರ್-ಬ್ಯಾಟರ್ ಬ್ರಿಯಾನ್ ಥಾಮಸ್ ಸಿಡಿಸಿದ ಆಕರ್ಷಕ ಶತಕದ ನೆರವಿನಿಂದ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕ್ರಿಕೆಟ್ (ಏIಔಅ) ತಂಡವು 50 ಓವರ್‍ಗಳ ಪಂದ್ಯದಲ್ಲಿ ವೆಂಗ್‍ಸರ್ಕಾರ್ ಕ್ರಿಕೆಟ್ ಅಕಾಡೆಮಿ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ಗೆಲುವಿಗೆ 220 ರನ್‍ಗಳ ಗುರಿ ಬೆನ್ನತ್ತಿದ ಕೆಐಒಸಿ, ಇನ್ನೂ 16.5 ಓವರ್‍ಗಳು ಬಾಕಿ ಇರುವಂತೆಯೇ 33.1 ಓವರ್‍ಗಳಲ್ಲಿ 3 ವಿಕೆಟ್ ಕಳೆದುಕೊಂಡು 220 ರನ್ ಗಳಿಸಿ ವಿಜಯದ ನಗೆ ಬೀರಿತು.
ವೆಂಗ್‍ಸರ್ಕಾರ್ ಅಕಾಡೆಮಿಗೆ ಅರ್ಧಶತಕಗಳ ಆಸರೆ
ಮೊದಲು ಬ್ಯಾಟಿಂಗ್ ಮಾಡಿದ ವೆಂಗ್‍ಸರ್ಕಾರ್ ಕ್ರಿಕೆಟ್ ಅಕಾಡೆಮಿ, ನಾಯಕ ಅರುಣೋದಯ್ ಸಿಂಗ್ ಮತ್ತು ಪ್ರಜ್ಯೋತ್ ಗುಂಡಲೆ ಅವರ ಸಮಯೋಚಿತ ಅರ್ಧಶತಕಗಳ ನೆರವಿನಿಂದ 48.4 ಓವರ್‍ಗಳಲ್ಲಿ 219 ರನ್ ಗಳಿಗೆ ಆಲೌಟ್ ಆಯಿತು. ಆರಂಭಿಕ ಆಟಗಾರ ಆರುಷ್ ಅಶುತೋಷ್ ಮಲ್ವಾಡೆ 20 ಎಸೆತಗಳಲ್ಲಿ 28 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಬಳಿಕ ನಾಯಕ ಅರುಣೋದಯ್ ಸಿಂಗ್ (64 ಎಸೆತಗಳಲ್ಲಿ 54 ರನ್, 8 ಬೌಂಡರಿ, 1 ಸಿಕ್ಸರ್) ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರೂ, ಮಧ್ಯಮ ಕ್ರಮಾಂಕದ ಕುಸಿತದಿಂದಾಗಿ ತಂಡ 135 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ಹಂತದಲ್ಲಿ ಕೆಳಕ್ರಮಾಂಕದ ಬ್ಯಾಟರ್‍ಗಳೊಂದಿಗೆ ಸೇರಿ ತಂಡಕ್ಕೆ ಆಸರೆಯಾದ ಪ್ರಜ್ಯೋತ್ ಗುಂಡಲೆ, 70 ಎಸೆತಗಳಲ್ಲಿ 8 ಬೌಂಡರಿ ಸಹಿತ 53 ರನ್ ಗಳಿಸಿದರು. ಅವಧೂತ್ ನಾಳೆ (10) ಮತ್ತು ಗೌರವ್ ಮಿಸಾಳ್ (22) ಅವರ ಉಪಯುಕ್ತ ಕಾಣಿಕೆಯಿಂದ ತಂಡದ ಮೊತ್ತ 200ರ ಗಡಿ ದಾಟಿತು. ಕೆಐಒಸಿ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ವಿರೇನ್ ಸೀರ್ವಿ 44 ರನ್ ನೀಡಿ 3 ವಿಕೆಟ್ ಪಡೆದರೆ, ವಿವೇಕ್ ಸೀರ್ವಿ (2/35), ಹನ್ನಾನ್ ಜಾಕಿ ಅಹ್ಮದ್ (2/44) ಮತ್ತು ಜಶ್ (2/34) ತಲಾ ಎರಡು ವಿಕೆಟ್ ಕಬಳಿಸಿ ಮಿಂಚಿದರು.
ಥಾಮಸ್-ಭಾವಿತ್ ಶತಕದ ಜೊತೆಯಾಟ ಸವಾಲಿನ ಗುರಿ ಬೆನ್ನತ್ತಿದ ಕೆಐಒಸಿ ತಂಡವು 45 ರನ್‍ಗಳಾಗುವಷ್ಟರಲ್ಲಿ ನಾಯಕ ರೇಯೆಸ್ ರಾಜ್ ಮಧುಸೂದನ್ (3) ಅವರ ವಿಕೆಟ್ ಕಳೆದುಕೊಂಡಿತು. ಆದರೆ, ಎರಡನೇ ವಿಕೆಟ್‍ಗೆ ಜೊತೆಯಾದ ಬ್ರಿಯಾನ್ ಥಾಮಸ್ ಮತ್ತು ಭಾವಿತ್ ಎದುರಾಳಿ ಬೌಲರ್‍ಗಳನ್ನು ಮನಬಂದಂತೆ ದಂಡಿಸಿದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಥಾಮಸ್, ಕೇವಲ 99 ಎಸೆತಗಳಲ್ಲಿ 16 ಬೌಂಡರಿ ಹಾಗೂ 2 ಸಿಕ್ಸರ್‍ಗಳ ನೆರವಿನಿಂದ 110 ರನ್ ಸಿಡಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು.
ಥಾಮಸ್‍ಗೆ ಉತ್ತಮ ಸಾಥ್ ನೀಡಿದ ಭಾವಿತ್ 55 ಎಸೆತಗಳಲ್ಲಿ 47 ರನ್ ಗಳಿಸಿದರು. ಈ ಜೋಡಿ ಎರಡನೇ ವಿಕೆಟ್‍ಗೆ 119 ರನ್‍ಗಳ ನಿರ್ಣಾಯಕ ಜೊತೆಯಾಟವಾಡಿತು. ತಂಡದ ಮೊತ್ತ 164 ಆಗಿದ್ದಾಗ ಥಾಮಸ್ ವಿಕೆಟ್ ಒಪ್ಪಿಸಿದರೆ, 178 ರನ್‍ಗಳ ವೇಳೆ ಭಾವಿತ್ ರನೌಟ್ ಆದರು. ನಂತರ ಕ್ರೀಸ್‍ಗೆ ಬಂದ ಸೂರ್ಯ ಮನೋಜ್ (ಅಜೇಯ 25) ಮತ್ತು ಆರಿನ್ ಸೇನ್ (ಅಜೇಯ 14) ಯಾವುದೇ ಆತಂಕವಿಲ್ಲದೆ ತಂಡವನ್ನು ಗೆಲುವಿನ ದಡ ಸೇರಿಸಿದರು.