
ಬೆಂಗಳೂರು, ನ. ೧೭- ದೇಶದಲ್ಲಿ ಪ್ರಜಾತಂತ್ರವನ್ನು ಬಲಪಡಿಸಲು ಪಂಚಾಯ್ತಿಯಿಂದ ಹಿಡಿದು ಸಂಸತ್ನ ವರೆಗೂ ಮಹಿಳೆಯರ ಸಹಭಾಗಿತ್ವ ಅವಶ್ಯ. ಹಾಗಾಗಿ ವಿಧಾನಸಭೆ ಹಾಗೂ ಲೋಕಸಭೆಗಳಲ್ಲೂ ಮಹಿಳೆಯರಿಗೆ ಶೇ. ೩೩ ರಷ್ಟು ಮೀಸಲಾತಿ ನೀಡುವ ವಿಧೇಯಕ ಜಾರಿ ಇಂದಿನ ಅಗತ್ಯ ಮತ್ತು ಅವಶ್ಯ ಎಂದು ಲೋಕಸಭೆಯ ಸಭಾಧ್ಯಕ್ಷ ಓಂಬಿರ್ಲಾ ಹೇಳಿದರು.
ವಿಧಾನಸೌಧದ ಬ್ಯಾಕ್ಪೆಂಟ್ ಹಾಲ್ನಲ್ಲಿಂದು ಕಾಮನ್ ವೆಲ್ತ್ ಮಹಿಳಾ ಸಂಸದೀಯ ಪಟುಗಳ ಭಾರತ ಪ್ರಾದೇಶಿಕ ವಿಭಾಗದ ಮೊದಲ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಂಚಾಯತ್ ವ್ಯವಸ್ಥೆಯಲ್ಲಿ ಈಗಾಗಲೇ ಮಹಿಳೆಯರಿಗೆ ಶೇ. ೩೩ ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಅದೇ ರೀತಿ ವಿಧಾನಸಭೆ ಮತ್ತು ಲೋಕಸಭೆಯಲ್ಲೂ ಮಹಿಳೆಯರಿಗೆ ಶೇ. ೩೩ ರಷ್ಟು ಮೀಸಲಾತಿ ನೀಡಲೇಬೇಕು ಎಂದರು.
ಶಾಸನ ಸಭೆ ಮತ್ತು ಲೋಕಸಭೆಗಳಲ್ಲಿ ಮಹಿಳಾ ಮೀಸಲಾತಿ ನೀಡುವ ನಿಟ್ಟಿನಲ್ಲಿ ಸಂಸತ್ನಲ್ಲಿ ನಾರಿಶಕ್ತಿ ವಂದನಾ ಮಸೂದೆಯನ್ನು ಮಂಡಿಸಲಾಗಿದ್ದು, ಮಸೂದೆಯನ್ನು ಜಾರಿ ಮಾಡುವ ಅಗತ್ಯತೆ ಇದೆ ಎಂದರು.
ಮಹಿಳೆಯರು ಈಗ ಎಲ್ಲಾ ರಂಗದಲ್ಲೂ ಮುಂಚೂಣಿಯಲ್ಲಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲೂ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ ದೊಡ್ಡದಿತ್ತು. ಅದೇ ರೀತಿ ಸ್ವಾತಂತ್ರ್ಯ ನಂತರವೂ ಮಹಿಳೆಯರ ಸಹಭಾಗಿತ್ವ ಎಲ್ಲಾ ರಂಗದಲ್ಲೂ ಇದೆ. ಸೇನೆ, ಶಿಕ್ಷಣ, ವಿಜ್ಞಾನ, ಉದ್ಯಮ, ತಂತ್ರಜ್ಞಾನ, ಬಾಹ್ಯಾಕಾಶ, ಕ್ರೀಡೆ ಎಲ್ಲಾ ರಂಗದಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಗಡಿ ರಕ್ಷಣೆಯಲ್ಲೂ ಮಹಿಳೆಯರು ಹಿಂದೆ ಬಿದ್ದಿಲ್ಲ. ದೇಶದ ರಾಜನೀತಿಯಲ್ಲೂ ಮಹಿಳೆಯರು ನೇತೃತ್ವ ವಹಿಸಿದ್ದಾರೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಶಾಸನ ಸಭೆ ಮತ್ತು ಲೋಕಸಭೆಯಲ್ಲಿ ಶೇ. ೩೩ ರಷ್ಟು ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸಲೇಬೇಕು. ಮಹಿಳೆಯರು ಸಂವೇದನಾ ಶೀಲತೆ ಮತ್ತು ಜನರ ಕಲ್ಯಾಣಕ್ಕೆ ಬದ್ಧರಾಗಿ ಹೆಚ್ಚು ಕೆಲಸ ಮಾಡುತ್ತಾರೆ. ಹಾಗಾಗಿ ಶಾಸನ ಸಭೆ ಮ ತ್ತು ಲೋಕಸಭೆಯಗಳಲ್ಲಿ ಶೇ. ೩೩ ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದೇಶದಲ್ಲಿ ಮತ್ತಷ್ಟು ಸದೃಢಗೊಳಿಸಬಹುದು ಎಂದರು.
ರಾಜಕಾರಣದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯತ್ವವನ್ನು ಬಲಪಡಿಸಬಹುದು ಎಂದು ಲೋಕಸಭೆಯ ಅಧ್ಯಕ್ಷ ಓಂಬಿರ್ಲಾ ಹೇಳಿದರು.
ತಂತ್ರಜ್ಞಾನಕ್ಕೆ ಆದ್ಯತೆ
ಮಹಿಳೆಯರು ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಎಐ ಸೇರಿದಂತೆ ಎಲ್ಲಾ ತಂತ್ರಜ್ಞಾನವನ್ನು ಅರಿತುಕೊಂಡು ಡಿಜಿಟಲ್ ವೇದಿಕೆಯ ಮೂಲಕ ಮತ್ತಷ್ಟು ಸಬಲರಾಗಬೇಕು ಎಂದು ಹೇಳಿದರು.
ರಾಜಕಾರಣದಲ್ಲಿರುವ ಮಹಿಳಾ ಜನಪ್ರತಿನಿಧಿಗಳು ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಜನರ ಸಂಕಷ್ಟಗಳಿಗೆ ಪರಿಹಾರ ಒದಗಿಸಲು ಸಾಧ್ಯವಿದೆ. ಹಾಗಾಗಿ ತಂತ್ರಜ್ಞಾನ ಬಳಕೆಗೆ ಮಹಿಳಾ ಜನಪ್ರತಿನಿಧಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಹೇಳಿದರು.
ತಂತ್ರಜ್ಞಾನ ಬಳಕೆಯ ಮೂಲಕ ಉತ್ತಮ ಹಾಗೂ ಒಳ್ಳೆಯ ಆಡಳಿತವನ್ನು ನೀಡಲು ಸಾಧ್ಯ. ಸಮಾಜದಲ್ಲಿ ಪರಿವರ್ತನೆ ತರಲು ತಂತ್ರಜ್ಞಾನ ಬಳಕೆ ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಹಾಗಾಗಿ ಮಹಿಳಾ ಜನಪ್ರತಿನಿಧಿಗಳು ತಂತ್ರಜ್ಞಾನ ಬಳಕೆಯನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳಬೇಕು ಎಂದರು.
ತಂತ್ರಜ್ಞಾನ ಬಳಕೆಯಿಂದ ಮಹಿಳೆಯರು ಆತ್ಮನಿರ್ಬರತೆ, ಸ್ವಾವಲಂಬನೆ ಸಾಧಿಸಲು ಸಾಧ್ಯ. ಆರ್ಥಿಕ, ಸಾಮಾಜಿಕ ಸಬಲೀಕರಣದ ಜತೆಗೆ ತಂತ್ರಜ್ಞಾನ ಸಬಲೀಕರಣ ಸಾಧಿಸಲು ಮಹಿಳಾ ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ ಎಂದು ಅವರು ಹೇಳಿದರು .
ಸಂಸದೀಯ ಸಮಿತಿ ಸಹ ಮಹಿಳೆಯರ ಸಬಲೀಕರಣದ ಬಗ್ಗೆ ಮಾಡಿದ ಹಲವು ಶಿಫಾರಸ್ಸುಗಳನ್ನು ಜಾರಿ ಮಾಡಲಾಗಿದೆ ಎಂದು ಹೇಳಿದರು.
ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. ೩೩ ರಷ್ಟು ಪ್ರಾತಿನಿಧ್ಯ ನೀಡುವ ಮೂಲಕ ಆಡಳಿತದಲ್ಲಿ, ಶಾಸನ ರಚನೆಯಲ್ಲಿ ಮಹಿಳೆಯರ ಸಹಭಾಗಿತ್ವವನ್ನು ಹೆಚ್ಚಿಸಬಹುದಾಗಿದೆ. ಈ ಮೂಲಕ ಸಶಕ್ತ ದೇಶ ನಿರ್ಮಾಣವೂ ಸಾಧ್ಯವಾಗಲಿದೆ. ಸದೃಢ ದೇಶ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ ಎಂದು ಅವರು ಹೇಳಿದರು.




















